ಗುತ್ತಲದಲ್ಲಿ ಅನಧಿಕೃತ ಡಬ್ಬಾ ಅಂಗಡಿ ತೆರವು, ಮಾಲೀಕರ ವಿರೋಧ

| Published : Sep 04 2025, 01:01 AM IST

ಸಾರಾಂಶ

ಡಬ್ಬಾ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಆಸ್ಪತ್ರೆ ಮತ್ತು ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಮಾಲೀಕರಿಗೆ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ತಿಳಿಸಿದರು.

ಗುತ್ತಲ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರಿಗಿದ್ದ ಅನಧಿಕೃತ 5 ಡಬ್ಬಾ ಅಂಗಡಿಗಳನ್ನು ಬುಧವಾರ ತೆರವುಗೊಳಿಸಲಾಯಿತು. ಉಳಿದ ಅಂಗಡಿಗಳನ್ನು ತೆರವಿಗೆ ಮುಂದಾದಾಗ ಮಾಲೀಕರು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಡಬ್ಬಾ ಅಂಗಡಿ ಮಾಲೀಕರು ಮಾತನಾಡಿ, ನಮಗೂ ಕುಟುಂಬ ಇದೆ. ನೀವು ತೆರವುಗೊಳಿಸಿದರೆ ನಾವು ಬೀದಿಪಾಲಾಗುತ್ತೇವೆ. ಅಂಗಡಿಗಳನ್ನು ನಂಬಿ ಸಾಲ ಮಾಡಿ, ಮಕ್ಕಳ ಶಿಕ್ಷಣವನ್ನು ಮುಂದುವರಿಸಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಮಗೆ ಅಂಗಡಿ ತೆರವು ಮಾಡಲು ಅವಕಾಶ ನೀಡಬೇಕೆಂದು ಅಂಗಡಿ ಮಾಲೀಕರಾದ ವಿಜಯಲಕ್ಷ್ಮಿ ನೀರಲಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎದುರು ಅಳಲು ತೋಡಿಕೊಂಡರು.

ಬಸ್ ನಿಲ್ದಾಣದ ಎದುರುಗಡೆ ಅನಧಿಕೃತ ಹಣ್ಣಿನ ಮತ್ತು ಹೂವು ಮಾರುವ ಅಂಗಡಿಗಳನ್ನು, ಸಮುದಾಯ ಆರೋಗ್ಯ ಕೇಂದ್ರದ ಎದುರಿಗೆ ಕೋಳಿ ಕುರಿ ಮಾಂಸದ ಅಂಗಡಿಗಳನ್ನು ತೆರವುಗೊಳಿಸಿ, ನಂತರ ಅಂಗಡಿಗಳನ್ನು ತೆರವು ಮಾಡುತ್ತವೆ ಎಂದು ಮಾಲೀಕರು ಹಠ ಹಿಡಿದು ಕುಳಿತರು.

ಸಮುದಾಯ ಆರೋಗ್ಯ ಕೇಂದ್ರದ ಎದುರು ಸಂಪೂರ್ಣ ಅಸ್ವಚ್ಛತೆಯಿಂದ ಕೂಡಿದೆ. ಆಸ್ಪತ್ರೆಗೆ ಬಂದ ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುತ್ತಾರೆ. ತುರ್ತು ಚಿಕಿತ್ಸೆಗೆ ಬಂದ ಆ್ಯಂಬುಲೆನ್ಸ್‌ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ. ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದರೆ ದ್ವಿಚಕ್ರ ವಾಹನಗಳನ್ನು ಹೊರಗಡೆ ನಿಲ್ಲಿಸಿದರೆ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಮುಖ್ಯಾಧಿಕಾರಿ ತಿಳಿಸಿದರು.ಡಬ್ಬಾ ಅಂಗಡಿಗಳ ಮಧ್ಯದಲ್ಲಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಆಸ್ಪತ್ರೆ ಆವರಣ ಗಬ್ಬು ನಾರುತ್ತಿದೆ. ರೋಗಿಗಳು ಸೊಳ್ಳೆಗಳ ಕಾಟದಿಂದ ಪರಿತಪಿಸುತ್ತಿದ್ದಾರೆ. ಕೂಡಲೆ ಡಬ್ಬಾ ಅಂಗಡಿಗಳನ್ನು ತೆರವು ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳು ಹಲವಾರು ಬಾರಿ ಪಟ್ಟಣ ಪಂಚಾಯಿತಿಗೆ ಮನವಿ ನೀಡಿದ್ದಾರೆ. ಡಬ್ಬಾ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಆಸ್ಪತ್ರೆ ಮತ್ತು ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಮಾಲೀಕರಿಗೆ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರದ ಎದುರಿಗೆ ಎಲ್ಲ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲು ಒಂದು ವಾರ ಅವಕಾಶ ನೀಡಲಾಗಿದೆ. ವಾರದ ನಂತರ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಯಾವುದೆ ಸೂಚನೆ ಇಲ್ಲದೆ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದರು.