ಕನ್ನಡಪ್ರಭ ವಾರ್ತೆ ಪಾವಗಡ

ಪಾವಗಡ-ಚಳ್ಳಕೆರೆ ರಾಜ್ಯ ಹೆದ್ದಾರಿ-48 ರಸ್ತೆಯ ಕೋಟಗುಡ್ಡ ಹಾಗೂ ಅರೇಕ್ಯತನಹಳ್ಳಿ ಗ್ರಾಮಗಳ ಮಧ್ಯ ಭಾಗದಲ್ಲಿ ಖಾಸಗಿ ಸೋಲಾರ್ ವಿದ್ಯುತ್ ಕಂಬಗಳು ಆಳವಡಿಸಲು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿಯಮಬಾಹಿರವಾಗಿ ಅನುಮತಿ ನೀಡಿದ್ದು ತಕ್ಷಣವೇ ಕಾಮಗಾರಿ ನಿಲ್ಲಿಸಿ ವಿದ್ಯುತ್‌ ಕಂಬಗಳನ್ನು ತೆರುವು ಗೋಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪೂಜಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೋಟಗುಡ್ಡ ಗ್ರಾಮದ ನೂರಾರು ಮಂದಿ ರೈತರ ಜತೆ ಕೋಟಗುಡ್ಡ ಗ್ರಾಮದ ವೃತ್ತದಲ್ಲಿ ಖಾಸಗಿ ಸೋಲಾರ್ ಕಂಪನಿ ಮಾಲೀಕರ ಹಾಗೂ ಪಿಡಬ್ಲ್ಯೂಡಿ ಇಲಾಖೆ ಎಇಇ ಚೇತನ್‌ ಕುಮಾರ್‌ ವಿರುದ್ಧ ರಸ್ತೆ ತಡೆ ನಡೆಸಿ ನಂತರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿದರು.

ಪಾವಗಡ-ಚಳ್ಳಕೆರೆ ಹೆದ್ದಾರಿ ರಸ್ತೆಯಿಂದ ಖಾಸಗಿ ಸೋಲಾರ್ ಘಟಕದ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ರಸ್ತೆಯ ಪಕ್ಕದಲ್ಲಿ ಬೃಹತ್‌ ಗಾತ್ರದ ಕಂಬಗಳನ್ನು ಆಳವಡಿಸುತ್ತಿದೆ. ಸರ್ಕಾರದ ನಿಯಮನುಸಾರ ಯಾವುದೇ ಕೆಲಸ ಮುಖ್ಯ ರಸ್ತೆ ಮಧ್ಯಬಾಗದಿಂದ 40 ಮೀಟರ್ ದೂರದಲ್ಲಿ ಕಾಮಗಾರಿ ಮಾಡಬಾಕೆಂದು ಆದೇಶ ಇದ್ದರೂ ಸಹ ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಖಾಸಗಿ ಸೋಲಾರ್ ವಿದ್ಯುತ್ ಉತ್ವಾದನಾ ಮಾಲೀಕರ ಜೊತೆಗೆ ಶಾಮೀಲಾಗಿ ರಸ್ತೆಯ ಪಕ್ಕದ 10 ಅಡ್ಡಿಗಳಷ್ಟು ದೂರದಲ್ಲಿ ಕಂಬಗಳನ್ನು ಆಳವಡಿಸಿದ್ದು ಸಾರ್ವಜನಿಕರಿಗೆ ತೊಂದರೆ ಆಗಲಿದೆ ಎಂದು ಆರೋಪಿಸಿದರು. ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಸುಮಾರು ವರ್ಷಗಳಿಂದ ಬೆಳೆಸಿದ ಮರಗಳು ಏನಾಗಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ನೋಟಿಸ್ ನೀಡದೇ ಮೌನವಹಿದ್ದು, ಇದರ ಹಿಂದೆ ಏನಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಸಂಬಂಧಪಟ್ಟ ಜಿಲ್ಲಾಧಿಕಾರಿ ಇವರ ವಿರುದ್ದ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.ಗ್ರಾಮಸ್ಥ ಪಾಂಡುರಂಗ ಮಾತನಾಡಿ, ತಾಲೂಕಿನ ಕೊಟಗುಡ್ಡ,ಅರೇಕ್ಯಾತನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಖಾಸಗಿ ಸೋಲಾರ್ ವಿದ್ಯುತ್ ಕಂಬಗಳ ಲೈನ್ ಹಾದುಹೋಗುತ್ತಿದ್ದು, ಗ್ರಾಮದಲ್ಲಿ ಶಾಲಾ ಕಟ್ಟಡಗಳು, ಆಸ್ಪತ್ರೆಗಳು,ಅಂಗನವಾಡಿ ಕೇಂದ್ರಗಳು ಇದ್ದು ಸಾರ್ವಜನಿಕರು ಪ್ರತಿನಿತ್ಯ ಕಂಬಗಳ ಮಧ್ಯ ಓಡಾಡುವ ಸ್ಥಳವಾಗಿದೆ. ಇದರಿಂದ ಗ್ರಾಮದ ಹೊರಗೆ ಸೋಲಾರ್ ವಿದ್ಯುತ್ ಕಂಬಗಳು ಆಳವಡಿಸಬೇಕು. ಗ್ರಾಮಸ್ಥರೆಲ್ಲ ಸೋಲಾರ್ ಕಂಬ ಹಾಕಬೇಡಿ ಅಂತ ಹೇಳಿದರೂ ದೌರ್ಜನ್ಯದಿಂದ ಮಾಲೀಕರು ಅಳವಡಿಸಿರುವುದಾಗಿ ಆರೋಪಿಸಿದರು.ಮುಖಂಡ ಚಂದ್ರ ಮಾತನಾಡಿದರು. ಈ ವೇಳೆ ರೈತರಾದ ರಘುನಾಯಕ, ರಾಮಾಂಜಿನಪ್ಪ ತಾ,ಅಧ್ಯಕ್ಷ ಶಿವು,ಚಿತ್ತಯ್ಯ, ನರಸಿಂಹಪ್ಪ,ದುರ್ಗಪ್ಪ,ಅಕ್ಕಲಪ್ಪ,ಹನುಮಂತರಾಯಪ್ಪ, ನಾಗೇಂದ್ರಪ್ಪ, ಸುರೇಶ್, ಆನಂದ, ವೆಂಕಟೇಶ್ ಇತರರಿದ್ದರು.