ಕನ್ನಡಪ್ರಭ ವಾರ್ತೆ ಮಂಡ್ಯ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐರ್‌ಆರ್) ಪ್ರಕ್ರಿಯೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ನಕಲಿ ಮತದಾರರನ್ನು ತೆಗೆದು ಹಾಕುವುದು ಅಗತ್ಯವಾಗಿದೆ ಎಂದು ಸಾಮಾಜಿಕ ವಿಶ್ಲೇಷಕ ನರೇಂದ್ರಮೂರ್ತಿ ಪ್ರತಿಪಾದಿಸಿದರು.

ನೆಹರು ನಗರದ ಕಮಲ ಮಂದಿರದಲ್ಲಿ ಮಂಥನ ಮಂಡ್ಯ ವತಿಯಿಂದ ನಡೆದ ಉಪನ್ಯಾಸ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಸರ್ಕಾರಿ ನೌಕರರು ಅರ್ಜಿಗಳನ್ನು ವಿತರಿಸಿದ್ದಾರೆ. 2002ರಲ್ಲಿ ಮತದಾನ ಮಾಡಿರುವ ಸಂಬಂಧ ದಾಖಲಾತಿಗಳನ್ನು ಒದಗಿಸಿದಲ್ಲಿ ಮತದಾರರ ಪಟ್ಟಿಯಲ್ಲಿ ದಾಖಲಿಸಲು ಸಾಧ್ಯ ಎಂದರು.

ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಮತ್ತು ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಲು ಎಸ್‌ಐಆರ್ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಮುಖರು ಮನೆ ಮನೆಗಳಿಗೆ ತೆರಳಿ ಸಮಗ್ರ ಮಾಹಿತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುವ ಬಗ್ಗೆ ಸಾರ್ವಜನಿಕರಿಗೂ ತಿಳಿಸಬೇಕು. ಜೊತೆಗೆ ತಮ್ಮ ಮಕ್ಕಳನ್ನು ಹೇಗೆ ಮತದಾರರ ಪಟ್ಟಿಗೆ ಸೇರಿಸಬೇಕು ಎಂಬುದರ ಕುರಿತು ವಿವರಿಸಿದರು.


ಮತದಾರರ ಪಟ್ಟಿಗೆ ಸೇರ್ಪಡೆಗೆ ಆ.8 ಕೊನೆ ದಿನ. ನಂತರ ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಿ ಪರಿಶೀಲಿಸಿ ಪಟ್ಟಿಯಲ್ಲಿ ತಮ್ಮ ಹೆಸರು ಇವೆಯೇ ಎಂಬುದರ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು. ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಕೆ ಮಾಡಬೇಕು.

ತಪ್ಪಾಗಿರುವ ಹೆಸರು, ವಿಳಾಸವಿದ್ದಲ್ಲಿ ಅ.9ರ ನಂತರ ಸಂಬಂಧಿಸಿದ ಕಚೇರಿಗೆ ತೆರಳಿ ಮೇಲ್ಮನವಿ ಸಲ್ಲಿಸಿ ಸರಿಪಡಿಸಬಹುದು ಎಂದರು.

ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕವೂ ತಮ್ಮ ಎಲ್ಲ ವಿವರಗಳನ್ನು ಸಲ್ಲಿಸಲುವ ಅವಕಾಶವಿದೆ. ಅದಕ್ಕಾಗಿ ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಪಡೆದು ದಾಖಲಿಸಿ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಿದಲ್ಲಿ ಅದೂ ಸಹ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಆಹ್ವಾನಿತ ಗಣ್ಯರು ತಮ್ಮಲ್ಲಿರುವ ಸಂದೇಹಗಳ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು.

ಉದ್ಯಮಿ ಎನ್.ಡಿ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನವೀನ್ ಪ್ರಸ್ತಾವನೆ ಸಲ್ಲಿಸಿದರು. ಸುಂಡಹಳ್ಳಿ ಮಹೇಶ್ ನಿರೂಪಿಸಿದರು.