ಸತತ ಹೋರಾಟದ ನಂತರ ರೈತರು ಪ್ರತಿ ಟನ್ ಕಬ್ಬಿಗೆ ₹3600 ದರ ನಿಗದಿಪಡಿಸಿದರೂ, ಅದನ್ನು ಕೊಡಲು ಸಾಧ್ಯವಿಲ್ಲ ಎಂದು ವಿಜಯಪುರ ಜಿಲ್ಲೆಯ ಒಟ್ಟು ಏಳು ಸಕ್ಕರೆ ಕಾರ್ಖಾನೆಗಳು ಹೇಳಿವೆ. ಇದರಿಂದಾಗಿ ಇನ್ನೇನು ಕಬ್ಬಿಗೆ ಸೂಕ್ತ ದರ ನೀಡಬೇಕೆದು ನಡೆಸುತ್ತಿದ್ದ ರೈತರ ಹೋರಾಟ ವಿಜಯಪುರದಲ್ಲಿ ಮತ್ತೊಂದು ಮಜಲು ಪಡೆದುಕೊಂಡಿದೆ. ರಿಕವರಿ ಬೆಳಗಾವಿ ಜಿಲ್ಲೆಯಷ್ಟು ವಿಜಯಪುರ ಜಿಲ್ಲೆಯಲ್ಲಿ ಬರುವುದಿಲ್ಲ ಎಂಬ ಒಂದೇ ಕಾರಣವನ್ನಿಟ್ಟುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರು ಟನ್ ಕಬ್ಬಿಗೆ ₹3254 ನೀಡೋಕೆ ಒಪ್ಪಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಸತತ ಹೋರಾಟದ ನಂತರ ರೈತರು ಪ್ರತಿ ಟನ್ ಕಬ್ಬಿಗೆ ₹3600 ದರ ನಿಗದಿಪಡಿಸಿದರೂ, ಅದನ್ನು ಕೊಡಲು ಸಾಧ್ಯವಿಲ್ಲ ಎಂದು ವಿಜಯಪುರ ಜಿಲ್ಲೆಯ ಒಟ್ಟು ಏಳು ಸಕ್ಕರೆ ಕಾರ್ಖಾನೆಗಳು ಹೇಳಿವೆ. ಇದರಿಂದಾಗಿ ಇನ್ನೇನು ಕಬ್ಬಿಗೆ ಸೂಕ್ತ ದರ ನೀಡಬೇಕೆದು ನಡೆಸುತ್ತಿದ್ದ ರೈತರ ಹೋರಾಟ ವಿಜಯಪುರದಲ್ಲಿ ಮತ್ತೊಂದು ಮಜಲು ಪಡೆದುಕೊಂಡಿದೆ. ರಿಕವರಿ ಬೆಳಗಾವಿ ಜಿಲ್ಲೆಯಷ್ಟು ವಿಜಯಪುರ ಜಿಲ್ಲೆಯಲ್ಲಿ ಬರುವುದಿಲ್ಲ ಎಂಬ ಒಂದೇ ಕಾರಣವನ್ನಿಟ್ಟುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರು ಟನ್ ಕಬ್ಬಿಗೆ ₹3254 ನೀಡೋಕೆ ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಕಬ್ಬು ಬೆಳೆಗಾರರು ಸುತಾರಾಂ ಒಪ್ಪುತ್ತಿಲ್ಲ. ಬದಲಾಗಿ ರಿಕವರಿ ಆಧಾರದ ಮೇಲಿಂದ ₹3500 ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದು, ಎರಡು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.ಈ ಕುರಿತು ಶನಿವಾರ ಸಂಜೆ ನಾಲ್ಕು ಗಂಟೆಯಿಂದ ರಾತ್ರಿವರೆಗೂ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರುಗಿತು. ರಿಕವರಿ ಆಧಾರದ ಮೇಲೆ ದರ ನಿಗದಿ ಮಾಡಲು ಡಿಸಿ, ಎಸ್ಪಿ, ಆಹಾರ ಇಲಾಖೆ ಉಪ ನಿರ್ದೇಶಕ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ಪ್ರತ್ಯೇಕ ಸಭೆ ಜರುಗಿತು.
ಸಭೆಯ ಬಳಿಕ ರೈತರನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ವಿಜಯಪುರ ಜಿಲ್ಲೆಯ ಭೀಮಾ ನದಿ ತಟದ ಕಬ್ಬಿನ ರಿಕವರಿ 10.12 ಬರುತ್ತಿದೆ. ಟನ್ ಕಬ್ಬಿಗೆ ₹3254 ನೀಡೋಕೆ ಕಾರ್ಖಾನೆಯವರು ಮುಂದೆ ಬಂದಿದ್ದಾರೆ. ಆದರೆ, ಇದಕ್ಕೆ ನಾವು ಒಪ್ಪಿಲ್ಲ. ಬೆಳಗಾವಿ ಭಾಗದಲ್ಲಿ ಹಿಂದಿನದಕ್ಕಿಂತ ₹350 ಹೆಚ್ಚುವರಿ ಬೆಲೆ ನೀಡಿದಂತೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಏಕರೂಪ ದರ ನಿರ್ಧಾರ ಕೇಂದ್ರದಿಂದ ನಿರ್ಧಾರ ಆಗಬೇಕಿದೆ. ಇದು ತುಂಬಾ ಸಮಯ ಹಿಡಿಯುವುದರಿಂದ ಈಗಿನ ದರ ನಿಗದಿ ಕುರಿತು ನಿರ್ಧಾರ ಮಾಡಲಾಗುತ್ತಿದೆ ಎಂದು ಹೇಳಿದರು.ವಿಜಯಪುರ ಜಿಲ್ಲೆಯಲ್ಲಿ 2025ರಲ್ಲಿ ₹2950 ಪ್ರತಿ ಟನ್ಗೆ ನೀಡಲಾಗಿದೆ. ಇದಕ್ಕೆ ಹೆಚ್ಚುವರಿ 350 ನೀಡಲಿದ್ದಾರೆ. ಅಂದರೆ ₹3300 ಟನ್ ಕಬ್ಬಿಗೆ ನೀಡಲು ಕಾರ್ಖಾನೆಯವರು ಸಮ್ಮತಿಸಿದ್ದಾರೆ. ಇದರಲ್ಲಿ ₹3200 ಮೊದಲ ಕಂತು, ನಂತರ ₹.100 ಎರಡನೇ ಕಂತಲ್ಲಿ ನೀಡಲು ಕಾರ್ಖಾನೆಯವರು ನೀಡಲಿದ್ದಾರೆ ಎಂದು ಸಭೆಗೆ ಡಿಸಿ ಮಾಹಿತಿ ನೀಡಿದರು.
ಆದರೆ ₹3300 ದರ ನಿಗದಿಗೆ ಒಪ್ಪದ ರೈತರು, ದರ ಪುನಃ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ಬೆಳಗಾವಿಗೆ ಹೆಚ್ಚುವರಿ ಬೆಲೆ ₹350 ಸಿಗುತ್ತಿದೆ. ಕಳೆದ ಬಾರಿ ವಿಜಯಪುರ ಜಿಲ್ಲೆಯ ಭೀಮಾನದಿ ತಟದ ಸಕ್ಕರೆ ಕಾರ್ಖಾನೆಗಳು ₹2950 ಟನ್ಗೆ ನೀಡಿದ್ದರು. ಹೆಚ್ಚುವರಿ ₹350 ಪ್ರತಿ ಟನ್ಗೆ ನೀಡಲು ಒಪ್ಪಿದ್ದಾರೆ. ಈ ಭಾಗದಲ್ಲಿ ₹3500 ನೀಡಬೇಕೆಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಯವರು ಚರ್ಚೆ ಮಾಡಲಿ. ಒಂದೆರಡು ದಿನಗಳ ಕಾಲ ಸಮಯ ತೆಗೆದುಕೊಳ್ಳಲಿ. ನಂತರ ನಿರ್ಧಾರ ತಿಳಿಸಲಿ. ರಿವಕರಿ ಕಡಿಮೆ ಬರುತ್ತಿರುವ ಕುರಿತು ತಪಾಸಣೆಯಾಗಲಿ. ದರ ನಿಗದಿ ವಿಚಾರದಲ್ಲಿ ಕಾರ್ಖಾನೆಯವರ ನಿಲುವು ಬದಲಾಗದಿದ್ದರೆ ಕಷ್ಟ. ದರ ನೀಡದ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡಲ್ಲ, ಹೋರಾಟ ಮುಂದುವರೆಯಲಿದೆ ಎಂದರು.