ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ನಿಧನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ನಿಧನರಾಗಿದ್ದಾರೆ. ತಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಶನಿವಾರ ಮಧ್ಯೆ ರಾತ್ರಿ ಕೊನೆ ಉಸಿರೆಳೆದಿದ್ದಾರೆ.ಚಲನಚಿತ್ರ ನಿರ್ದೇಶಕರಾಗಿ ಬಹು ಭಾಷೆಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಜನಪ್ರಿಯ ಯಶಸ್ವಿ ಚಿತ್ರಗಳನ್ನು ನೀಡಿದ ರಾವ್ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ವಾಸವಿದ್ದ ತೆಲುಗು ಮೂಲದ ಸಿಂಗೀತಂ ಅವರು ನಟರಾದ ಡಾ.ರಾಜಕುಮಾರ್, ಶಿವರಾಜಕುಮಾರ್, ಜಗ್ಗೇಶ್ ಅವರ ಜೊತೆ ನಿರ್ದೇಶಿಸಿದ ಚಿತ್ರಗಳನ್ನು ಮರೆಯುವಂತಿಲ್ಲ. ಹಾಲು ಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮಿ ಬಾರಮ್ಮ, ದೇವತಾ ಮನುಷ್ಯ, ಮೇಕಪ್, ಆನಂದ್, ಚಿರಂಜೀವಿ ಸುಧಾಕರ, ಟುವ್ವಿ ಟುವ್ವಿ ಟುವ್ವಿ ಮುಂತಾದ ಚಿತ್ರಗಳನ್ನು ಕನ್ನಡದಲ್ಲಿ ನಿರ್ದೇಶಿಸಿ ಕನ್ನಡಿಗರ ಮನ ಗೆದ್ದಿದ್ದರು.ನಿರ್ದೇಶಕ ಸಿಂಗೀತಂ ಶ್ರೀನಿವಾಸ ಅವರು ಡಾ.ರಾಜ್‌ಕುಮಾರ್ ಅವರ ನಟನೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. 1982ರಲ್ಲಿ ಮೂಡಿಬಂದ ‘ಹಾಲು ಜೇನು’ ಕುಟುಂಬದ ಭಾವನಾತ್ಮಕ ಸಂಬಂಧಗಳನ್ನು ಮನಮುಟ್ಟುವಂತೆ ಬಿಂಬಿಸಿ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 1986ರಲ್ಲಿ ತೆರೆಕಂಡ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರವು ಸಿಂಗೀತಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ತಂದುಕೊಟ್ಟಿತು. ಡಾ.ರಾಜ್ ಅವರ 200ನೇ ಮೈಲಿಗಲ್ಲಿನ ಚಿತ್ರವಾದ ‘ದೇವತಾ ಮನುಷ್ಯ’ (1988) ಚಿತ್ರವನ್ನೂ ನಿರ್ದೇಶಿಸಿದ ಹೆಗ್ಗಳಿಕೆ ಸಿಂಗೀತಂ ಅವರದ್ದಾಗಿದೆ.
ಕನ್ನಡ ಚಿತ್ರರಂಗದಲ್ಲಿ ಭಾವನಾತ್ಮಕ ಸಿನಿಮಾಗಳನ್ನಷ್ಟೇ ಅಲ್ಲದೆ, ಹಾಸ್ಯಮಯ ಸಿನಿಮಾಗಳನ್ನೂ ರೂಪಿಸುವ ಮೂಲಕ ವೈವಿಧ್ಯಮಯ ಶೈಲಿಯ ಚಿತ್ರಗಳ ಸೃಷ್ಟಿಕರ್ತ ಎನ್ನುವ ಹೆಮ್ಮೆ ಮತ್ತು ಮೆಚ್ಚುಗೆಯ ಮಾತುಗಳಿಗೆ ಪಾತ್ರರಾದವರು ಸಿಂಗೀತಂ ಅವರು.ಚಿತ್ರರಂಗದಲ್ಲಿ ತಮ್ಮದೇ ಆದ ಕ್ರಾಂತಿಕಾರಕ ಪ್ರಯೋಗಗಳಿಗೆ ಹೆಸರಾಗಿದ್ದ ಸಿಂಗೀತಂ ಅವರು ಯಾವುದೇ ಸಂಭಾಷಣೆಗಳಿಲ್ಲದೆ ನಿರ್ದೇಶಕರಾಗಿದ್ದ, ಕಮಲ್ ಹಾಸನ್ ನಟನೆಯ 1987ರಲ್ಲಿ ಮೂಡಿಬಂದ ‘ಪುಷ್ಪಕ ವಿಮಾನ’ ಚಿತ್ರವು ಪ್ರೇಕ್ಷಕರನ್ನು ಅಚ್ಚರಿಗೊಳಿಸಿತ್ತು. ಇದು ಸಿಂಗೀತಂ ಅವರ ಟ್ರೇಡ್ ಮಾರ್ಕ್ ಚಿತ್ರ ಕೂಡ ಹೌದು. ಇದರ ಮತ್ತೊಂದು ವಿಶೇಷ ಎಂದರೆ ಈ ಚಿತ್ರ ನಿರ್ಮಾಣ ಹಾಗೂ ಪ್ರದರ್ಶನಗೊಂಡಿದ್ದು ಬೆಂಗಳೂರಿನಲ್ಲೇ. ಈ ಕ್ರಾಂತಿಕಾರಿ ಪ್ರಯೋಗಕ್ಕೆ ಸಿಂಗೀತಂ ಅವರು ಅತ್ಯುತ್ತಮ ನಿರ್ದೇಶಕ ವಿಭಾಗಥಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಯಶಸ್ವಿ ಚಿತ್ರಗಳನ್ನು ನೀಡಿದ ಸಿಂಗೀತಂ ಅವರು 90ರ ದಶಕದ ಹೊತ್ತಿಗೆ ಕನ್ನಡದಲ್ಲಿ ಸಿನಿಮಾಗಳನ್ನು ನಿರ್ದೇಶಿಸುವುದನ್ನು ನಿಲ್ಲಿಸಿದ್ದರು. ಅಪರೂಪಕ್ಕೆ ಕನ್ನಡ ಚಿತ್ರಗಳ ಕಾರ್ಯಕ್ರಮಗಳಿಗೆ ಭಾಗವಹಿಸಲು ಬೆಂಗಳೂರಿಗೆ ಬರುತ್ತಿದ್ದರು.ಕನ್ನಡದಲ್ಲಿ ಭಾವನಾತ್ಮಕ ಹಾಗೂ ಹಾಸ್ಯ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಸಿಂಗೀತಂ ಅವರು ತೆಲುಗಿನಲ್ಲಿ ಆದಿತ್ಯ 369, ಭೈರವ ದ್ವೀಪಂ ನಂತಹ ಮೈಥಾಲಾಜಿಕಲ್ ಹಾಗೂ ಸೈನ್ಸ್ ಫಿಕ್ಷನ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
1991ರಲ್ಲೇ ಫ್ಯೂಚರ್ ಫ್ಯಾಂಟಸಿ ಲೋಕವನ್ನು ಬೆಳ್ಳಿ ಪರದೆಯ ಮೇಲೆ ಆದಿತ್ಯ 369 ಚಿತ್ರದ ಮೂಲಕ ದರ್ಶನ ಮಾಡಿಸಿದ ಹೆಗ್ಗಳಿಕೆ ಸಿಂಗೀತಂ ಅವರದ್ದು. ತಮ್ಮ ಈ ಇಳಿ ವಯಸ್ಸಿನಲ್ಲೂ ಸಿಂಗ್ ಗೀತಂ ಹೆಸರಿನ ಯಂಗ್ ಜನರೇಶನ್ ಸಿನಿಮಾ ಮಾಡಿ ಅಚ್ಚರಿ ಮೂಡಿಸಿದವರು ಸಿಂಗೀತಂ. ಈ ಚಿತ್ರ ಇದೇ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿತ್ತು.ತಮ್ಮ ವಿಶಿಷ್ಟ ಸಿನಿಮಾ, ಕತೆ, ನಿರೂಪಣೆ, ತಾಂತ್ರಿಕ ನೈಪುಣ್ಯತೆ ಮತ್ತು ಪ್ರೇಕ್ಷಕರ ಮನ ಗೆಲ್ಲುವ ಶೈಲಿಯಿಂದ ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗಕ್ಕೆ ಸುವರ್ಣ ಯುಗದ ಮೆರುಗು ನೀಡಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ಹೆಸರು ಕನ್ನಡ ಸಿನಿರಸಿಕರ ಮನದಲ್ಲಿ ಎಂದಿಗೂ ಅಮರ.