ಕೆಲಕಾಲದಿಂದ ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇನ್ನೇನು ಶ್ರೀಪಾದ್ ಭಟ್
ಶಿರಸಿ: ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ಬಯಲಾಟ ಮೇಳಗಳಲ್ಲಿಯೂ ವೇಷಧಾರಿಯಾಗಿ ಶ್ರೀಪಾದ ಭಟ್ ಅವರು ಗತ್ತು ಗಾಂಭೀರ್ಯ ಸ್ವಭಾವದ ನಾಯಕ ಮತ್ತು ಖಳ ನಾಯಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು.ಯಕ್ಷಗಾನ ರಂಗದಲ್ಲಿ ಇವರು ಇಂದ್ರನಾಗಿ, ರಾಮ ಹಾಗೂ ವಿವಿಧ ರಾಜ ಗಾಂಭೀರ್ಯದ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಕರಾವಳಿಯ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ಕೆಲಕಾಲದಿಂದ ತೀವ್ರವಾದ ಕಾಲು ನೋವು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇನ್ನೇನು ಶ್ರೀಪಾದ್ ಭಟ್ ಅವರು ಚೇತರಿಕೊಂಡು ಮತ್ತೆ ಯಕ್ಷಗಾನ ರಂಗಕ್ಕೆ ಮರಳುತ್ತಿದ್ದಾರೆ ಎನ್ನುವಷ್ಟರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರು ಯಕ್ಷಗಾನ ಭಾಷೆಯಲ್ಲಿ ಸಮರ್ಥ ಎರಡನೇ ವೇಷಧಾರಿಯಾಗಿದ್ದರು.ಈ ಅಗಲುವಿಕೆ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಪೌರಾಣಿಕ ಪ್ರಸಂಗದ ಯಾವುದೇ ಪಾತ್ರ ನಿರ್ವಹಿಸುವ ಶಕ್ತಿ ಅವರಲ್ಲಿತ್ತು. ಆಳಂಗ, ಕಂಚಿನ ಕಂಠ, ಹಿತಮಿತವಾದ ಕುಣಿತ, ಪಾತ್ರಕ್ಕೆ ಬೇಕಾದ ಪರಿಪೂರ್ಣ ಅರ್ಥಗಾರಿಕೆ ಅವರನ್ನು ಆವರಿಸಿಕೊಂಡಿತ್ತು. ಅಲ್ಲದೆ ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿ ಅನೇಕ ನೂತನ ಪ್ರಸಂಗಗಳ ಪಾತ್ರಗಳಿಗೆ ಜೀವ ಅವರು ತುಂಬಿದ್ದರು.
ಶ್ರೀಪಾದ ಭಟ್ ಅವರು ತಂದೆ, ತಾಯಿ ಮತ್ತು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲುವಿಕೆಗೆ ಯಕ್ಷಗಾನ ರಂಗದ ಅನೇಕ ಕಲಾವಿದರು, ಕಲಾಪ್ರೇಮಿಗಳು ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ ಥಂಡಿಮನೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.