Renu assaults, abuses former soldier
-ನ್ಯಾಮತಿ ಗ್ಯಾಸ್ ಏಜೆನ್ಸಿಗೆ ನುಗ್ಗಿ ಗಲಾಟೆ । ಏಜೆನ್ಸಿ ಪಾಲುದಾರಿಕೆಗೆ ಸಹಿ ಹಾಕಲಿಲ್ಲವೆಂಬ ಕಾರಣ ಆರೋಪ?
ಕನ್ನಡಪ್ರಭ ವಾರ್ತೆ, ದಾವಣಗೆರೆಮಾಜಿ ಸೈನಿಕನಿಗೆ ಸೇರಿದ ಗ್ಯಾಸ್ ಏಜೆನ್ಸಿಗೆ ನುಗ್ಗಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿ, ಪತ್ನಿ, ಪುತ್ರಿ ಹಾಗೂ ಗ್ರಾಹಕರ ಸಮಕ್ಷಮದಲ್ಲೇ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಎ. ಪರಮೇಶ್ವರಪ್ಪ, ನ್ಯಾಮತಿ ಪಟ್ಟಣದಲ್ಲಿ ಮಾಜಿ ಯೋಧ ಎಚ್.ವಿ. ಚಂದ್ರಪ್ಪ ಒಡೆತನದ ವೇದ ಇಂಡಿಯನ್ ಗ್ಯಾಸ್ ಏಜೆನ್ಸಿಗೆ ಆ.18ರಂದು ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಬೆಂಬಲಿಗಲು ನುಗ್ಗಿ, ಹಲ್ಲೆ ಮಾಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡುವ ಜೊತೆಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಂಘದಿಂದ ಪ್ರಧಾನ ಮಂತ್ರಿಗಳ ಕಚೇರಿಗೂ ಮನವಿ ಮಾಡಲಿದ್ದೇವೆ ಎಂದರು.ಮಾಜಿ ಸಚಿವ ರೇಣುಕಾಚಾರ್ಯ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ರೇಣುಕಾಚಾರ್ಯ ವಿರುದ್ಧ ಮಾಜಿ ಸೈನಿಕರು ಹೋರಾಟ ನಡೆಸಬೇಕಾಗುತ್ತದೆ. ಜೀವದ ಹಂಗು ತೊರೆದು ಹೋರಾಡಿದ ಸೈನಿಕರ ಬಗ್ಗೆ ರೇಣುಕಾಚಾರ್ಯ ಹಗುರ ಮಾತನಾಡುತ್ತಿರುವುದು ಖಂಡನೀಯ. ಮಾಜಿ ಸೈನಿಕ ಚಂದ್ರಪ್ಪ ಮೇಲೆ ಎಂ.ಪಿ. ರೇಣುಕಾಚಾರ್ಯ ಯಾಕೆ ಹಗೆ ಸಾಧಿಸುತ್ತಿದ್ದಾರೋ ಗೊತ್ತಿಲ್ಲ. ಸೈನಿಕರ ಬಗ್ಗೆ ಅಪಾರ ಗೌರವ ಹೊಂದಿರುವ ಪಕ್ಷದವರಾದ ರೇಣುಕಾಚಾರ್ಯ ತಮ್ಮ ವರ್ತನೆ ತಿದ್ದಿಕೊಳ್ಳಲಿ ಎಂದು ಅವರು ಸಲಹೆ ನೀಡಿದರು.
ಸಂತ್ರಸ್ತ ಮಾಜಿ ಸೈನಿಕ ಎಚ್.ವಿ. ಚಂದ್ರಪ್ಪ ಮಾತನಾಡಿ, ಮೂಲತಃ ಅಜ್ಜಂಪುರದವರಾದ ತಾವು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದು, 1995ರಲ್ಲಿ ಪುಲ್ವಾಮದ ದಾಳಿಯಲ್ಲಿ ಒಂದು ಕಣ್ಣು ಹಾಗೂ ದೇಹದ ಕೆಲ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದರಿಂದ ಸೇವೆಯಿಂದ ನಿವೃತ್ತನಾಗಿದ್ದೆ. ಮಾಜಿ ಸೈನಿಕರ ಕೋಟಾದಡಿ ಗ್ಯಾಸ್ ಏಜೆನ್ಸಿ ಮಂಜೂರಾಗಿದ್ದು, ನ್ಯಾಮತಿಯಲ್ಲಿ ಏಜೆನ್ಸಿ ನಡೆಸುತ್ತಾ ಜೀವಿಸುತ್ತಿದ್ದೇನೆ. 4 ವರ್ಷದ ಹಿಂದೆ ಏಜೆನ್ಸಿ ಪಾಲುದಾರಿಕೆ ನೀಡುವಂತೆ ರೇಣುಕಾಚಾರ್ಯ ಸಹೋದರ ಎಂ.ಪಿ. ರಮೇಶ ನನಗೆ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಅದಕ್ಕೆ ಒಪ್ಪದೇ ನಾನು ತಪ್ಪಿಸಿಕೊಂಡು ಬಂದಿದ್ದೆ ಎಂದರು.ಗ್ಯಾಸ್ ಏಜೆನ್ಸಿ ಪಾಲುದಾರಿಕೆಗೆ ಸಹಿ ಮಾಡಲಿಲ್ಲವೆಂಬ ಕಾರಣಕ್ಕೆ ತಮ್ಮ ವಿರುದ್ಧ ರೇಣುಕಾಚಾರ್ಯ ದ್ವೇಷ ಸಾಧಿಸುತ್ತಾ ಬಂದಿದ್ದಾರೆ. ಮಧ್ಯ ಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ದೇಶವಷ್ಟೇ ಅಲ್ಲ, ವಿದೇಶಗಳಲ್ಲೂ ವ್ಯತ್ಯಾಯವಾಗಿತ್ತು. ಇದೆಲ್ಲಾ ಗೊತ್ತಿದ್ದರೂ, ಗ್ಯಾಸ್ ವಿತರಿಸುತ್ತಿಲ್ಲವೆಂಬ ವಿಚಾರ ಮುಂದಿಟ್ಟುಕೊಂಡು ಗ್ಯಾಸ್ ಏಜೆನ್ಸಿ ಕಚೇರಿಗೆ ನುಗ್ಗಿ ಬಾಗಿಲು ಹಾಕಿ, ಅವಾಚ್ಯ ಶಬ್ದಗಳಿಂದ ತಮಗೆ ನಿಂದಿಸಿದ್ದಾರೆ. ತಮ್ಮ ಪತ್ನಿ, ಪುತ್ರಿ ವಿರುದ್ಧವೂ ಏಕವಚನದಲ್ಲಿ ಮಾತನಾಡಿದ್ದಾರೆ. ನೂಕಾಟ, ತಳ್ಳಾಟದಲ್ಲಿ ತಾವು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದ ನಂತರ ಅಲ್ಲಿಂದ ರೇಣುಕಾಚಾರ್ಯ ಮತ್ತು ಬೆಂಬಲಿಗರು ಹೇಳದೇ, ಕೇಳದೆ ಕಾಲ್ಕಿತ್ತಿದ್ದರು ಎಂದು ಅವರು ದೂರಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಪತ್ನಿ, ಮಗಳು ತಮಗೆ ಕರೆದೊಯ್ದು ದಾಖಲಿಸಿದ್ದರು. ಕಳೆದ 4 ತಿಂಗಳಲ್ಲಿ 3-4 ಸಲ ಇದೇ ರೀತಿ ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ನುಗ್ಗಿ ಗಲಾಟೆ ಮಾಡಲಾಗಿದೆ. 16 ವರ್ಷದಿಂದ ಯಾರಿಗೂ ತೊಂದರೆಯಾಗದಂತೆ ತಾವು ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಯಾವುದೇ ಗ್ರಾಹಕರಿಗೂ ಸಮಸ್ಯೆಯಾಗಿಲ್ಲ. ಆದರೆ, ರೇಣುಕಾಚಾರ್ಯ ಮಾತ್ರ ಗುಂಪು ಕಟ್ಟಿಕೊಂಡು ಬಂದು, ಪದೇಪದೇ ತೊಂದರೆ ನೀಡುತ್ತಿರುವುದು ಸರಿಯಲ್ಲ. 3 ವರ್ಷ ಕಾಲ ನನ್ನ ಗ್ಯಾಸ್ ಏಜೆನ್ಸಿ ಲೈಸನ್ಸ್ ಸಹ ಅಮಾನತುಪಡಿಸಿದ್ದರು. ಉದ್ದೇಶಪೂರ್ವಕವಾಗಿತಮ್ಮ ವಿರುದ್ಧ ರೇಣುಕಾಚಾರ್ಯ ಇದೇ ರೀತಿ ಮಾಡುತ್ತಿರುವುದು ಒಳ್ಳೆಯದಲ್ಲ. ತಮ್ಮ ಕಚೇರಿಗೆ ನುಗ್ಗಿ, ಹಲ್ಲೆ ಮಾಡಿದ ಬಗ್ಗೆ ದೂರು ನೀಡಿದ್ದೇವೆ. ಆದರೆ, ಯಾವುದೇ ಕ್ರಮ ಆಗಿಲ್ಲ ಎಂದರು.
ಸಂಘದ ರಮೇಶ ಮಾತನಾಡಿ, ಭಾರತೀಯ ಯೋಧರಿಗೆ ಗೌರವಿಸುವ ಪಕ್ಷವೆಂದು ಹೇಳುತ್ತಾರೆ. ಆದರೆ, ಅದೇ ಪಕ್ಷದ ಮಾಜಿ ಸಚಿವರೊಬ್ಬರು ಮಾಜಿ ಸೈನಿಕರ ಕೋಟಾದಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿರುವ ಮಾಜಿ ಸೈನಿಕ ಮತ್ತು ಕುಟುಂಬದ ವಿಚಾರದಲ್ಲಿ ಹೀಗೆ ವರ್ತಿಸುತ್ತಿರುವುದು ಸರಿಯಲ್ಲ. ಒಬ್ಬ ಮಾಜಿ ಸೈನಿಕ ಮತ್ತು ಕುಟುಂಬದ ವಿರುದ್ಧವೇ ಹೀಗೆ ಮಾಡುವ ವ್ಯಕ್ತಿಯು ಜನ ಸಾಮಾನ್ಯರ ಜೊತೆ ಹೇಗೆ ವರ್ತಿಸಬಹುದೆಂಬುದೇ ಪ್ರಶ್ನೆ. ರೇಣುಕಾಚಾರ್ಯ ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ನಮ್ಮ ಸಂಘದ ಮುಖಾಂತರ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಇಡೀ ಘಟನೆ ಕುರಿತಂತೆ ದೂರು ನೀಡಲಾಗುವುದು ಎಂದರು.ಸಂತ್ರಸ್ತ ಯೋಧ ಎಚ್.ವಿ.ಚಂದ್ರಪ್ಪ ಪತ್ನಿ ವೇದಾವತಿ, ಸಂಘದ ಗೌರವಾಧ್ಯಕ್ಷ ವಾಸಪ್ಪ, ಎ.ಪರಮೇಶ್ವರಪ್ಪ, ಡಿ.ವಿ. ರಮೇಶ ಜಗತಾಪ್, ಎಂ. ಮಂಜಣ್ಣ, ಜೆ.ಎಚ್. ರಾಜೀವ, ಬೆನಕನಹಳ್ಳಿ ಬಿ.ಜೆ.ಸಿದ್ದೇಶ್ವರಪ್ಪ, ಎಚ್.ಕಡದಕಟ್ಟೆ ಪರಸಪ್ಪ, ಎಚ್. ಹನುಮಂತಪ್ಪ, ಕೊಟ್ರೇಶ ರೆಡ್ಡಿ, ಹನುಮಂತಪ್ಪ, ಎಸ್.ಬಿ. ವೆಂಕಟೇಶ, ಎಚ್. ಆಂಜನೇಯ, ಗಂಗಾಧರ, ಪಿ.ಎಂ.ವೀರೇಶ, ಎಂ. ಮಂಜಪ್ಪ ಇತರರು ಇದ್ದರು.
........ಕ್ಯಾಪ್ಷನ್
25ಕೆಡಿವಿಜಿ1- ದಾವಣಗೆರೆಯಲ್ಲಿ ಶನಿವಾರ ಹೊನ್ನಾಳಿ, ನ್ಯಾಮತಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನ್ಯಾಮತಿ ಗ್ಯಾಸ್ ಏಜೆನ್ಸಿ ಮಾಲೀಕ, ಮಾಜಿ ಸೈನಿಕ ಎಚ್.ವಿ. ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.