ಭದ್ರಾ ನೀರಿನ ವಿಚಾರದ ತಮ್ಮ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ ಹರಿಹರ ಶಾಸಕ ಬಿ.ಪಿ.ಹರೀಶ ಉಂಡ ಮನೆಯ ಜಂತಿ ಎಣಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

- ಭದ್ರಾ ನೀರು, ರೈತಪರ ಹೋರಾಟ ಎಂದಿಗೂ ನಿಲ್ಲದು: ಎಂ.ಪಿ.ರೇಣುಕಾಚಾರ್ಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನೀರಿನ ವಿಚಾರದ ತಮ್ಮ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ ಹರಿಹರ ಶಾಸಕ ಬಿ.ಪಿ.ಹರೀಶ ಉಂಡ ಮನೆಯ ಜಂತಿ ಎಣಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ನಮ್ಮ ಹೋರಾಟವನ್ನು, ನಮ್ಮನ್ನು ಕೆಣಕಿದರೆ ತಕ್ಕ ಉತ್ತರವನ್ನೇ ನಾವು ನೀಡಬೇಕಾಗುತ್ತದೆ. ಇನ್ನು ಮುಂದೆ ಬಿ.ಪಿ.ಹರೀಶ ನಮ್ಮನ್ನು ಕೆಣಿಕಿದರೆ ಸುಮ್ಮನೇ ಕೂಡುವುದಿಲ್ಲ, ತಕ್ಕ ಉತ್ತರವನ್ನೇ ನೀಡುತ್ತೇವೆ ಎಂದರು.

ರೈತರ ಪರವಾಗಿ ಅದರಲ್ಲೂ ಭದ್ರಾ ಅಚ್ಚುಕಟ್ಟು ರೈತರ ಪರ 3 ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಈಗ ನಾಲೆಯಲ್ಲಿ ನೀರು ಬಿಟ್ಟಿದ್ದಾರೆಂದರೆ ನಮ್ಮೆಲ್ಲರ ಸಾಮೂಹಿಕ ಹೋರಾಟದ ಫಲ ಅದು. ನಾಲೆಗೆ ನೀರು ಬಿಡುವ ಆದೇಶ ಎಲ್ಲರಿಗಿಂತ ಮುಂಚೆ ಕೈಸೇರಿದ್ದು ನಮಗೆ. ರೈತ ಪರ ಹೋರಾಟ ನಡೆಸಿದ್ದ ನಮ್ಮನ್ನು ಬಿಜೆಪಿಯವರಲ್ಲ, ಕಾಂಗ್ರೆಸ್ಸಿನವರೆಂಬ ಹೇಳಿಕೆ ನೀಡಿರುವುದು ಬಿ.ಪಿ.ಹರೀಶರ ದುರ್ವರ್ತನೆಯ ಪರಮಾವಧಿ ಎಂದು ಕಿಡಿಕಾರಿದರು.

2008ರಿಂದ 2023ರವರೆಗೂ ಹರೀಶರನ್ನು ನಮ್ಮ ಮನೆಯ ಸಹೋದರರಂತೆ ಕಂಡಿದ್ದೇವೆ. ಆಶ್ರಯ ಕೊಟ್ಟವರನ್ನೇ ಮರೆಯುವಂತೆ ಹರೀಶ್ ವರ್ತಿಸಬಾರದು. ಭದ್ರಾ ಡ್ಯಾಂನಿಂದ ನೀರು ಬಿಡದಂತೆ ನಾನು ಒಂದೇ ಒಂದು ಹೇಳಿಕೆ ನೀಡಿದ ಸಾಕ್ಷ್ಯ ನೀಡಿದರೆ ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುತ್ತೇನೆ. ಅದೇ ಭದ್ರಾ ರೈತರ ಪರ ಹೋರಾಟದಲ್ಲಿ ಬಿ.ಪಿ.ಹರೀಶ ಭಾಗಿಯಾಗಿದ್ದ ಒಂದೇ ಒಂದು ವೀಡಿಯೋ ತೋರಿಸಲಿ ನೋಡೋಣ. ಅನಗತ್ಯವಾಗಿ ಹೇಳಿಕೆ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ನಮಗೆ ಹಣ ಬಲ, ತೋಳ್ಬಲ, ಅಧಿಕಾರ ಬಲಕ್ಕಿಂತಲೂ ಜನಬಲ ಅತೀ ಮುಖ್ಯ. ಸಾರ್ವಜನಿಕರ ಮಧ್ಯೆಯೇ ಇದ್ದೇವೆ, ಇರುತ್ತೇವೆ. ಹರಿಹರ ಕ್ಷೇತ್ರದ ಜನರು ನಿಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ನಿಮ್ಮ ಕ್ಷೇತ್ರದ ಜನರ ಆಶೋತ್ತರಕ್ಕೆ ಸ್ಪಂದಿಸಿ, ಕ್ಷೇತ್ರದ ಅಭಿವೃದ್ಧಿ, ಜನಪರ, ರೈತ ಪರ ಕೆಲಸ ಮಾಡಲು ಆದ್ಯತೆ ನೀಡಿ. ಈವರೆಗೂ ರಾಷ್ಟ್ರೀಯ, ರಾಜ್ಯ ನಾಯಕರಿಗೆ, ಕಾರ್ಯಕರ್ತರಿಗೆ ಮುಜುಗರ ಆಗಬಾರದೆಂದು ತಾಳ್ಮೆಯಿಂದಿದ್ದೆವು. ಇನ್ನು ವೈಯಕ್ತಿಕವಾಗಿ ಕೆಣಕಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಸಣ್ಣ ರೈತ, ದೊಡ್ಡ ರೈತ, ನಿರ್ಧಿಷ್ಟ ಬೆಳೆಯ ಬೆಳೆಗಾರರೆಂದು ರೈತರನ್ನು ವಿಭಜಿಸಬಾರದು. ಹತ್ತಿ, ಅಡಿಕೆ, ತೊದರೆ, ತರಕಾರಿ ಸೇರಿದಂತೆ ಯಾವುದೇ ಬೆಳೆ ಬೆಳೆಯುವ ರೈತರೆಲ್ಲರೂ ಒಂದೇ. ಶಾಸಕರಾದವರು ಎಲ್ಲಾ ವರ್ಗದ ರೈತರ ಪರ ನಿಲ್ಲಬೇಕು. ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದಕ್ಕಿಂತ ಕ್ಷೇತ್ರಾಭಿವೃದ್ಧಿ, ಜನಪರ ಕೆಲಸಕ್ಕೆ ಆದ್ಯತೆ ನೀಡಿ. ಭದ್ರಾ ಡ್ಯಾಂನಿಂದ ನಾಲೆ, ರೈತರ ಜಮೀನಿಗೆ ನೀರು ಹರಿಯುತ್ತಿದ್ದರೆ ತಮ್ಮ ನೇತೃತ್ವದ ಎಲ್ಲರ ಹೋರಾಟದ ಫಲವೇ ಹೊರತು, ಇದರಲ್ಲಿ ಶಾಸಕ ಬಿ.ಪಿ.ಹರೀಶ ಪ್ರಯತ್ನವೇನೂ ಇಲ್ಲ ಎಂದು ಅವರು ತಿರುಗೇಟು ನೀಡಿದರು.

ಭದ್ರಾ ನೀರು, ರಸಗೊಬ್ಬರ, ರೈತರ ಬೆಂಬಲ ಬೆಲೆಗಾಗಿ ಬಿಆರ್‌ಪಿ, ಹರಿಹರ ಬೈಪಾಸ್, ದಾವಣಗೆರೆ ಬೈಪಾಸ್‌, ಬೆಂಗಳೂರಿನಲ್ಲಿ ಸಿಎಂ ನಿವಾಸದ ಎದುರು ಹೋರಾಟ ನಡೆಸಿದ್ದೇವೆ. ನೀರು ಬಿಡುಗಡೆಯಾದ ಮೊದಲ ಆದೇಶದ ಪ್ರತಿ ನಮ್ಮನ್ನು ತಲುಪಿತ್ತು. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿ.ಪಿ.ಹರೀಶ ಅದರ ಶ್ರೇಯ ಪಡೆಯಲು ಯತ್ನಿಸುತ್ತಿರುವುದು ಹಾಸ್ಯಾಸ್ಪದ. ಮುತ್ತಿನಕೊಪ್ಪ ಏತ ಯೋಜನೆ ಬಾಕಿ ಕಾಮಗಾರಿಗೆ ₹30 ಕೋಟಿ ಅನುದಾನ, ರೈತರ ಎಲ್ಲ ಸಮಸ್ಯೆ ಪರಿಹಾರಕ್ಕೆ ನಮ್ಮ ಹೋರಾಟ ಮುಂದುವರಿಯಲಿದೆ. ಭದ್ರಾ ಡ್ಯಾಂ ತಾಯಿಗೆ ಸಮಾನ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಚಂದ್ರಶೇಖರ ಪೂಜಾರ, ರಾಜು ವೀರಣ್ಣ, ಪಂಜು ಪೈಲ್ವಾನ್, ಪ್ರವೀಣ ಜಾಧವ್‌, ಕೆ.ಎನ್.ವೆಂಕಟೇಶ, ಮೋಹನ ಜಗದೀಶ ಇತರರು ಇದ್ದರು.

- - -

(ಬಾಕ್ಸ್‌)

* ಕಾರ್ಯಕರ್ತರ ಉತ್ಸಾಹ ಕುಂದಿಸಬೇಡಿ: ಮಾಡಾಳ್

- ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿಕೆ, ವರ್ತನೆಗೆ ತೀವ್ರ ಅಸಮಾಧಾನ

ದಾವಣಗೆರೆ: ಸ್ವಪಕ್ಷದ ಹಿರಿಯ ನಾಯಕರು, ಯುವ ಮುಖಂಡರ ಬಗ್ಗೆ ಟೀಕಿಸುವುದು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಗೊಂದಲ ಮೂಡಿಸುವ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಿ.ಪಿ.ಹರೀಶ ತಾವು ನೀಡಿದ ಹೇಳಿಕೆಗಳನ್ನು ಹಿಂಪಡೆದು, ತಮ್ಮ ನಡವಳಿಕೆ ತಿದ್ದಿಕೊಳ್ಳಲಿ. ನಿಮ್ಮೊಂದಿಗೆ ನಿಂತ ಪಕ್ಷದ ನಾಯಕರು, ಕಾರ್ಯಕರ್ತರನ್ನು ಮರೆಯಬೇಡಿ ಎಂದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮತ್ತು ಅಡ್ಜಸ್ಟ್‌ಮೆಂಟ್ ರಾಜಕಾರಣ‍ ಅಂತೆಲ್ಲಾ ಹೇಳಿಕೆ ನೀಡಿ, ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ, ಆತ್ಮಸ್ಥೈರ್ಯ ಕುಸಿಯುವಂತೆ ಮಾಡಬೇಡಿ. ಹರೀಶ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಲಿ. ಮಾಧ್ಯಮಗಳ ಮುಂದೆ ವೈಯಕ್ತಿಕ ಆರೋಪ- ಪ್ರತ್ಯಾರೋಪಗಳ ಬದಲಿಗೆ ಓರ್ವ ಶಾಸಕರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲಿ. ವೃಥಾ ಆರೋಪ ಮಾಡುವುದು ಬೇಡ ಎಂದು ಹೇಳಿದರು.

ಮೂರು ವರ್ಷದಿಂದ ನಾವೆಲ್ಲಾ ಹೋರಾಟ ಮಾಡಿದ್ದೇವೆ, ಸಂಘಟನೆ ಮಾಡಿದ್ದೇವೆ. ಇದಕ್ಕೆ ನಿಮ್ಮ ಸಹಕಾರ ಇದೆಯಾ? ನಿಮ್ಮ ಹರಿಹರ ಕ್ಷೇತ್ರದಲ್ಲಿ ಎಷ್ಟು ಸದಸ್ಯತ್ವ ಮಾಡಿಸಿದ್ದೀರಿ? ಕಾರ್ಯಕರ್ತರು, ಮುಖಂಡರಿಗೆ ಅನ್ಯಾಯ ಮಾಡಬೇಡಿ. ಮನೆಯಲ್ಲಿ ಊಟ ಹಾಕುವುದಿಲ್ಲವೆಂಬ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತೀರಾ? ನಿಮಗೆ ಸ್ಯಾಡಿಸ್ಟ್ ಮನೋಭಾವನೆ ಇದ್ದು, ಅದನ್ನೆಲ್ಲಾ ನಮ್ಮ ಮೇಲೆ ತೋರಿಸಬೇಡಿ. ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸಬೇಡಿ ಎಂದು ಅವರು ಸಲಹೆ ನೀಡಿದರು.

ಮಾಮೂಲಿ ಹರೀಶಣ್ಣ ಆಗಿದ್ದರೆ ನಾವು ಹೇಳುತ್ತಿರಲಿಲ್ಲ. ಆದರೆ, ನೀವೊಬ್ಬ ಶಾಸಕರಾಗಿದ್ದಕ್ಕೆ ಹೇಳುತ್ತಿದ್ದೇವೆ. ನಿಮ್ಮ ಯೋಗ್ಯತೆಯಷ್ಟು ಹೋರಾಟ, ಸೇವೆ ಮಾಡಿ. ಯಾರೋ ಒಂದಾಗಬಾರದು, ಜಿಲ್ಲಾ ಬಿಜೆಪಿ ಒಂದಾಗಬಾರದೆಂಬ ಸ್ಯಾಡಿಸ್ಟ್ ಮನೋಭಾವ ಬೇಡ. ಪಕ್ಷದ ವಿಚಾರ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ. ಅನ್ಯಾಯ ಆದಾಗ ಎದೆಗೊಟ್ಟು ನಿಲ್ಲುತ್ತೇವೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವಾಚ್ಯವಾಗಿ ನಿಂದಿಸಿದ್ದು ಸರಿ ಅಂತಾ ನವು ಹೇಳಲ್ಲ. ನಿಮಗಷ್ಟೇ ಅಲ್ಲ, ಸಾಮಾನ್ಯರಿಗೆ ಬೈದರೂ ಅದನ್ನು ಖಂಡಿಸುತ್ತೇವೆ ಎಂದು ಅವರು ತಿಳಿಸಿದರು.

ಶಾಮನೂರು ಶಿವಶಂಕರಪ್ಪನವರ ಕೊಡುಗೆ ಜಿಲ್ಲೆಗೆ ಸಾಕಷ್ಟು ಇದೆ. ಯಾವುದೇ ವ್ಯಕ್ತಿಗೆ ಪ್ಲಸ್ ಮತ್ತು ಮೈನಸ್ ಅಂತಾ ಇರಬಹುದು. ಈಗ ಮಾತನಾಡುತ್ತಿರುವ ಬಿ.ಪಿ.ಹರೀಶ ಹಿಂದೆ ಶಾಮನೂರು ಶಿವಶಂಕರಪ್ಪನವರು ಇದ್ದಾಗಲೇ ಮಾತನಾಡಬೇಕಾಗಿತ್ತು. ಶಾಸಕತ್ವ ಹೋದರೆ ಯಾರೂ ಕೇಳುವುದಿಲ್ಲವೆಂದು ವಿಕೃತ ಭಾವನೆಯನ್ನೆಲ್ಲಾ ಈಗ ಹೊರಹಾಕುತ್ತಿದ್ದೀರಾ? ಇಂತಹದ್ದನ್ನೆಲ್ಲಾ ಬಿಡಿ ಎಂದು ಹೇಳಿದರು.

ನಿಮ್ಮಂತಹ ಅತೃಪ್ತ ಆತ್ಮಗಳಿಂದ ತೊಂದರೆ ಆಗಬಾರದು. ಪಕ್ಷದ ಕಾರ್ಯಾಲಯಕ್ಕೆ ಬನ್ನಿ. ನಿಮ್ಮ ಪರ ಮಾತನಾಡುವವರನ್ನೂ ಕರೆ ತನ್ನಿ. ಆಫ್‌ ದಿ ರೆಕಾರ್ಡ್‌, ಆನ್ ದಿ ರೆಕಾರ್ಡ್‌, ಬಾಗಿಲನ್ನು ಜಾಡಿಸಿ ಹೊಡೆದೆ ಅಂತೆಲ್ಲಾ ಹೇಳುತ್ತೀರಲ್ಲ ನಾಚಿಕೆ ಆಗುವುದಿಲ್ಲವೇ? ನಿಮ್ಮ ಬಳಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಒಂಟಿ ಕಾಲು ಹಾಕಿ ನಿಲ್ಲಿಸಬೇಕಾ ಎಂದು ಮಾಡಾಳ್ ಮಲ್ಲಿಕಾರ್ಜುನ ಹರಿಹರ ಶಾಸಕ ಬಿ.ಪಿ.ಹರೀಶ್‌ಗೆ ಪ್ರಶ್ನಿಸಿದರು.

- - -

-21ಕೆಡಿವಿಜಿ1, 2: ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.