ಮೇರು ವ್ಯಕ್ತಿತ್ವದ ದಾರ್ಶನಿಕ ರೇಣುಕಾಚಾರ್ಯರು

| Published : Mar 24 2025, 12:31 AM IST

ಸಾರಾಂಶ

ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರಿದ ರೇಣುಕಾಚಾರ್ಯರು ಮೇರು ವ್ಯಕ್ತಿತ್ವವದ ದಾರ್ಶನಿಕರು

ಯಲ್ಲಾಪುರ: ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರಿದ ರೇಣುಕಾಚಾರ್ಯರು ಮೇರು ವ್ಯಕ್ತಿತ್ವವದ ದಾರ್ಶನಿಕರು ಎಂದು ಕವಲೇದುರ್ಗದ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಮರುಳಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಅವರು ಶನಿವಾರ ಪಟ್ಟಣದ ಕಲ್ಮಠ ದೇವಸ್ಥಾನದಲ್ಲಿ ವೀರಶೈವ -ಲಿಂಗಾಯಿತ ಸಮಾಜದವರು ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಧರ್ಮ ಎಲ್ಲಿ ಇರುತ್ತದೆಯೋ ಅಲ್ಲಿ ಶಾಂತಿ ನೆಲೆಸಿರುತ್ತದೆ. ವೀರಶೈವ ಧರ್ಮ ಸಂಸ್ಥಾಪಕರಾಗಿ ತಮ್ಮ ತತ್ವ ಸಿದ್ಧಾಂತ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.

ಯಾರು ಶುದ್ಧ ಮನಸ್ಸಿನಿಂದ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಶಿವನ ಅವತಾರರೂಪಿ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಪಾಲಿಸುವವರೇ ವೀರಶೈವರು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸಮುದಾಯದ ಬೆಳವಣಿಗೆಗೆ ಸಂಘಟನೆಯೂ ಪ್ರಮುಖವಾಗಿರುತ್ತದೆ. ಉತ್ತಮ ಕಾರ್ಯಗಳ ಮೂಲಕ ಗುರುತಿಸಿಕೊಳ್ಳುವಂತಾಗಲಿ ಎಂದರು.

ಈ ಕಲ್ಮಠ ಪ್ರದೇಶ ಹಲವಾರು ವರ್ಷಗಳ ಹಿಂದೆ ಹೆಲಿಕ್ಯಾಪ್ಟರ್ ಇಳಿಸುವ ಜಾಗವಾಗಿತ್ತು. ಆದರೆ ಇಂದು ಅದರಲ್ಲಿಯೇ ಓಡಾಡುವವರೇ ಇಲ್ಲಿ ವಾಸವಾಗಿರುವುದರಿಂದ ಪ್ರತಿಷ್ಠಿತ ಬಡಾಣೆಯಾಗಿ ಗುರುತಿಸಿಕೊಂಡಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಾಣಲಿ ಎಂದರು.

ಮಾಜಿ ಶಾಸಕ ವಿ.ಎಸ್‌. ಪಾಟೀಲ ಮಾತನಾಡಿ, ಮಹಾತ್ಮರನ್ನು ಸ್ಮರಿಸಿಕೊಂಡ ಅವರು, ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಮಾತ್ರ ಧರ್ಮ ಉಳಿಯುತ್ತದೆ ಎಂದರು.

ಮುಂಡಗೋಡದ ವೇದಮೂರ್ತಿ ರುದ್ರಮುನಿ ಶಾಸ್ತ್ರಿ ಮಾತನಾಡಿ, ನಮ್ಮಲ್ಲಿ ಇಂದು ಧರ್ಮಾಚರಣೆ ಕುಗ್ಗುತ್ತಿವೆ. ಧರ್ಮ ಸಿದ್ಧಾಂತ ಮರೆಮಾಚುತ್ತ ಅವುಗಳನ್ನು ತಿರುಚಿ ಮೂಲವನ್ನೇ ಮರೆಯುತ್ತಿರುವುದು ವಿಷಾದನೀಯ ಎಂದರು.

ರೇಣುಕಾಚಾರ್ಯರು ಮಾನವನನ್ನು ಮಹಾದೇವನನ್ನಾಗಿ ನೋಡಿದ್ದಾರೆ. ಅನುಮಾನ, ಅಸೂಯೆ, ಅಹಂಕಾರದಿಂದ ದೂರವಿರುವ ಸಂಕಲ್ಪ ಎಲ್ಲರೂ ಮಾಡಬೇಕು. ಹಬ್ಬ ಜಯಂತಿ ಉತ್ಸವ ಮೂಲಕ ಮನುಷ್ಯನ ಮನದ ಮಾಲಿನ್ಯ ಕಳೆಯುವಂತಾಗಬೇಕು ಎಂದರು.

ಶಿರಸಿಯ ವೀರಶೈವ ಲಿಂಗಾಯತ ವಿವಿಧ ಸಮಿತಿಯ ಪ್ರಮುಖರಾದ ಬಸವರಾಜ ಚಕ್ರಸಾಲಿ, ಚಂದ್ರಶೇಖರ ಹಿರೇಮಠ, ಶಿವಯೋಗಿ ಹಂದ್ರಾಳ ಮಾತನಾಡಿದರು.

ಬಿಜೆಪಿ ಜಿಲ್ಲಾ ರೈತ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ ಹಾಗೂ ಶಿರಸಿ, ಹಳಿಯಾಳ ವೀರಶೈವ ಲಿಂಗಾಯತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆ ಸುಮಂಗಲಿಯರಿಂದ ಪೂರ್ಣಕುಂಭ, ವಿವಿಧ ವಾದ್ಯ ತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮೊರಾರ್ಜಿ ಶಾಲೆ ಶಿಕ್ಷಕಿಯರು ಪ್ರಾರ್ಥಿಸಿದರು. ವಿಷ್ಣು ಪಟಗಾರ ನಿರ್ವಹಿಸಿದರು.