ಕಲ್ಲು ತೂರಿದವರ ಬಂಧನಕ್ಕೆ ರೇಣುಕಾಚಾರ್ಯ 2 ದಿನ ಗಡುವು

| Published : Sep 26 2025, 01:00 AM IST

ಸಾರಾಂಶ

ಫ್ಲೆಕ್ಸ್ ಹಾಕುವ ವಿಚಾರಕ್ಕೆ ಕಲ್ಲು ತೂರಾಟ, ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಘಟನೆ ನಡೆದಿದ್ದ ಇಲ್ಲಿನ ಕಾರ್ಲ್ ಮಾರ್ಕ್ಸ್‌ ನಗರಕ್ಕೆ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿ.ಜಿ.ಅಜಯಕುಮಾರ ನೇತೃತ್ವದ ತಂಡ ಭೇಟಿ ನೀಡಿ, ಸ್ಥಳೀಯ ಹಿಂದೂಗಳಿಗೆ ಧೈರ್ಯ ತುಂಬಿದರು. ಯಮನೂರಪ್ಪ, ಮಾಲಾಶ್ರೀ ಎಂಬವರ ಮನೆಗಳಿಗೆ ಭೇಟಿ ನೀಡಿದರು. ನೊಂದವರ ನೋವು ಆಲಿಸಿದರು.

ದಾವಣಗೆರೆ: ಫ್ಲೆಕ್ಸ್ ಹಾಕುವ ವಿಚಾರಕ್ಕೆ ಕಲ್ಲು ತೂರಾಟ, ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಘಟನೆ ನಡೆದಿದ್ದ ಇಲ್ಲಿನ ಕಾರ್ಲ್ ಮಾರ್ಕ್ಸ್‌ ನಗರಕ್ಕೆ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿ.ಜಿ.ಅಜಯಕುಮಾರ ನೇತೃತ್ವದ ತಂಡ ಭೇಟಿ ನೀಡಿ, ಸ್ಥಳೀಯ ಹಿಂದೂಗಳಿಗೆ ಧೈರ್ಯ ತುಂಬಿದರು. ಯಮನೂರಪ್ಪ, ಮಾಲಾಶ್ರೀ ಎಂಬವರ ಮನೆಗಳಿಗೆ ಭೇಟಿ ನೀಡಿದರು. ನೊಂದವರ ನೋವು ಆಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಅವರು, ಬುಧವಾರ ತಡರಾತ್ರಿ ಕಾರ್ಲ್ ಮಾರ್ಕ್ಸ್‌ ನಗರದಲ್ಲಿ ಕಲ್ಲು ತೂರಾಟ, ದೌರ್ಜನ್ಯ ನಡೆಸಿದ ಕಿಡಿಗೇಡಿಗಳನ್ನು ಶನಿವಾರದ ಒಳಗಾಗಿ ಬಂಧಿಸಬೇಕು ಇಲ್ಲದಿದ್ದರೆ ಸೆ.28ರಂದು ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಪೊಲೀಸ್ ಇಲಾಖೆಗೆ ಎಚ್ಚರಿಸಿದರು.

ಹಿಂದೂ ಮಹಿಳೆಯರು, ಯುವತಿಯರು, ಯುವಕರು, ಪುಟ್ಟ ಮಕ್ಕಳ ಮೇಲೂ ರಾತ್ರಿ ಹಲ್ಲೆಯಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬಳಸಿದ್ದಾರೆ. ನಿರಪರಾಧಿ ಹಿಂದೂಗಳ ಮೇಲೆ ಹಾಕಿರುವ ಕೇಸ್‌ಗಳಿಗೆ ಬಿ ರಿಪೋರ್ಟ್ ಹಾಕಬೇಕು. ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ, ಜೈಲಿಗೆ ಹಾಕಬೇಕು. ಹಿಂದೂ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ, ಭದ್ರತೆ ಕಲ್ಪಿಸಬೇಕು. ಈ ಕುರಿತು ನಮ್ಮ ಮುಖಂಡರ ಸಮೇತ ತೆರಳಿ, ಎಸ್‌ಪಿ ಜೊತೆ ಮಾತನಾಡಿದ್ದೇನೆ ಎಂದ ಅವರು, ನಾಲ್ಕು ಜನ ಪೊಲೀಸರು ಇದ್ದರೂ, ಗುಂಪನ್ನು ನೋಡಿ, ತಾವೇ ಓಡಿ ಹೋಗಿದ್ದಾರೆ ಎಂದು ಅವರು ಕಿಡಿಕಾರಿದರು.

ಈ ಸಂದರ್ಭ ಮುಖಂಡರಾದ ಹಾಲೇಶ ನಾಯ್ಕ, ರಾಜು ವೀರಣ್ಣ, ಪಂಜು ಪೈಲ್ವಾನ ಇತರರಿದ್ದರು.

- - -

(ಬಾಕ್ಸ್‌)

* ನನ್ ಮಗಳಿಗೆ ಕಾಲಲ್ಲಿ ತುಳಿದ್ರು: ಗಂಗಮ್ಮ ಕಣ್ಣೀರು

ದಾವಣಗೆರೆ: ನನ್ನ ಮಗಳನ್ನು ಕಾಲಿನಲ್ಲಿ ಹಾಕಿ, ತುಳಿದು, ಹಲ್ಲೆ ಮಾಡಿದ್ದಾರೆ. ಮನೆ ಮುಂದೆ ನಿಮ್ಮ ಬ್ಯಾನರ್ ಹಾಕಬೇಡಿ ಅಂದಿದ್ದಕ್ಕೆ ನೂರಾರು ಜನ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಮಗಳನ್ನು ಬಿಡಿಸಿಕೊಳ್ಳಲು ಹೋದ ನನ್ನ ಮೇಲೂ ಹಲ್ಲೆ ಮಾಡಲು ಬಂದರು. ರಕ್ಷಣೆ ಕೊಡಬೇಕಾದ ಪೊಲೀಸರೆ ಇಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಹಿಂದೂಗಳ ಕೆಲವೇ ಮನೆಗಳು ಇಲ್ಲಿದ್ದು, ಸೂಕ್ತ ರಕ್ಷಣೆ ಕೊಡಿ ಎಂದು ಕಾರ್ಲ್ ಮಾರ್ಕ್ಸ್ ನಗರದ ಗಂಗಮ್ಮ ಇತರರು ಕಣ್ಣೀರಿಟ್ಟಿದ್ದಾರೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ತಡರಾತ್ರಿ ಅನ್ಯಕೋಮಿನ ಕಿಡಿಗೇಡಿಗಳ ಗುಂಪು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ, ಮನೆಗೆ ನುಗ್ಗಿ ಹಲ್ಲೆ ಮಾಡಿದ ಬಗ್ಗೆ ಗಂಗಮ್ಮ ಸೇರಿದಂತೆ ಸ್ಥಳೀಯರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು. ಸಂತ್ರಸ್ಥೆ ಗಂಗಮ್ಮನ ಪುತ್ರ ರಂಗನಾಥ ಮಾತನಾಡಿ, ನಮಗ್ಯಾರಿಗೂ ಇಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ನಾವು ಬದುಕಬೇಕಾ? ಸಾಯಬೇಕಾ? ಪೊಲೀಸರಿಗೆ ಎಲ್ಲವೂ ಗೊತ್ತಿದ್ದರೂ ಸುಮ್ಮನಿದ್ದಾರೆ. ಹಿಂದೂಗಳ ಮನೆಗಳು ಇಲ್ಲಿ ಹೆಚ್ಚಾಗಿಲ್ಲವೆಂತಲೇ ನಮ್ಮ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಮನೆ ಬಿಟ್ಟು, ಇಲ್ಲಿಂದ ಹೋಗಬೇಕು ಅಂತಲೇ ಹೀಗೆಲ್ಲಾ ಮಾಡುತ್ತಿದ್ದಾರೆ. ಫ್ಲೆಕ್ಸ್‌ಗೆ ಬ್ಲೇಡ್ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿ, ಜನರಿಗೆ ಸೇರಿಸಿದ್ದಾರೆ. ನಮ್ಮ ನೆರೆಹೊರೆಯವರಲ್ಲ, ಬೇರೆ ಏರಿಯಾದವರು ಇಲ್ಲಿಗೆ ಬಂದು ನಮ್ಮ ಏರಿಯಾದಲ್ಲಿ ಗಲಾಟೆ ಮಾಡುತ್ತಿದ್ದಾರೆ. ಎಂದು ರಂಗನಾಥ ಆ ಭಾಗದ ಹಿಂದೂಗಳ ಸಂಕಷ್ಟ, ಪೊಲೀಸರ ನಿರ್ಲಕ್ಷ್ಯದ ಬಗ್ಗೆ ವಿವರಿಸಿದರು.

- - -

-25ಕೆಡಿವಿಜಿ17, 18, 19, 20: ಕಾರ್ಲ್ ಮಾರ್ಕ್ಸ್ ನಗರಕ್ಕೆ ಗುರುವಾರ ಮಧ್ಯಾಹ್ನ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿ.ಜಿ.ಅಜಯಕುಮಾರ ಭೇಟಿ ನೀಡಿ, ಮಾಹಿತಿ ಪಡೆದು, ಅಹವಾಲು ಆಲಿಸಿದರು.