ರೇಣುಕಾಚಾರ್ಯರು ಕಾಲ್ಪನಿಕವಲ್ಲ, ಐತಿಹಾಸಿಕ ವ್ಯಕ್ತಿ: ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು

| Published : Mar 31 2024, 02:04 AM IST

ರೇಣುಕಾಚಾರ್ಯರು ಕಾಲ್ಪನಿಕವಲ್ಲ, ಐತಿಹಾಸಿಕ ವ್ಯಕ್ತಿ: ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌.ಎಲ್‌.ಎಸ್‌. ಕಾಲೇಜು ಮೈದಾನದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಂಟಿಯಾಗಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ವೀರಶೈವ-ಲಿಂಗಾಯತ ಸಮಾಜದ ಸಂಸ್ಥಾಪಕರಾದ ರೇಣುಕಾಚಾರ್ಯರ ಕುರಿತು ಸಮಾಜದಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ. ರೇಣುಕಾಚಾರ್ಯರೇ ಬೇರೆ, ರೇವಣಸಿದ್ಧರು ಬೇರೆ ಹಾಗೂ ರೇವಣಸಿದ್ದೇಶ್ವರರು ಬೇರೆ. ಈ ಮೂವರು ಸಾಧಕರ ಕಾಲಮಾನ ಹಾಗೂ ಚರಿತ್ರೆಗಳು ಬೇರೆ ಬೇರೆಯಾಗಿವೆ. ಆದರೆ, ಚರಿತ್ರೆ ಬರೆಯುವಾಗ ಈ ಮೂವರನ್ನು ಸೇರಿ ರೇಣುಕಾಚಾರ್ಯರ ಚರಿತ್ರೆಯನ್ನಾಗಿ ಮಾಡಿರುವುದು ರೇಣುಕಾಚಾರ್ಯರ ಇರುವಿಕೆ ಬಗ್ಗೆ ತಪ್ಪು ಕಲ್ಪನೆ ಸೃಷ್ಟಿಯಾಗಿದೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸ್ಪಷ್ಟಪಡಿಸಿದರು.

ಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಂಟಿಯಾಗಿ ಇಲ್ಲಿಯ ಆರ್‌.ಎಲ್‌.ಎಸ್‌. ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿಯಲ್ಲಿ ಆಶೀರ್ವಚನ ನೀಡಿದರು.

ರೇಣುಕಾಚಾರ್ಯರು ಕಾಲ್ಪನಿಕ, ಪೌರಾಣಿಕ ವ್ಯಕ್ತಿಯಲ್ಲ. ಅವರು ಅಗಸ್ತ್ಯ ಮಹರ್ಷಿ ಕಾಲದಲ್ಲಿದ್ದವರು. ರೇವಣಸಿದ್ಧರು 6ನೇ ಶತಮಾನದಲ್ಲಿ ಶಂಕರಾಚಾರ್ಯರ ಕಾಲದಲ್ಲಿದ್ದವರು. ಇನ್ನು, ರೇವಣಸಿದ್ದೇಶ್ವರರು 12ನೇ ಶತಮಾನದಲ್ಲಿ ಇದ್ದವರು. ಮೂವರು ಬದುಕಿದ ಕಾಲ ಬೇರೆ. ಕಾಲಘಟ್ಟದ ಸಂಗತಿಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ರೇಣುಕರ ಬಗ್ಗೆ ಸ್ಪಷ್ಟತೆ ಬರಲಿದೆ. ಅವರು ಕಾಲ್ಪನಿಕ ಅಲ್ಲ ಐತಿಹಾಸಿಕ ವ್ಯಕ್ತಿ ಎಂದರು.

ಅಲ್ಲಗಳೆಯುವುದು ಬೇಡ

ಸಿದ್ಧಾಂತ ಶಿಖಾಮಣಿ ಗ್ರಂಥವಾಗಿರಬಹುದು, ವಚನ ಸಾಹಿತ್ಯವಾಗಿರಬಹುದು, ಶಿವಾನುಭವಗಳಾಗಿರಬಹುದು ಎಲ್ಲವೂ ವೀರಶೈವ-ಲಿಂಗಾಯತ ಸಿದ್ಧಾಂತವನ್ನೇ ಹೇಳುತ್ತವೆ. ಯಾರೂ ಯಾವುದನ್ನು ತಿರಸ್ಕಾರ ಮಾಡದೇ, ಅವಹೇಳನ ಮಾಡದೇ ಸರಿಯಾಗಿ ಅರ್ಥೈಸಿಕೊಂಡು ಅದರೊಳಗಿನ ತತ್ವ - ಸಿದ್ಧಾಂತದ ಸಾರವನ್ನು ಪ್ರಸಾರದ ಕಾರ್ಯ ಮಾಡಬೇಕಿದೆ. ಅದನ್ನು ಬಿಟ್ಟು ವಚನ ಓದುವವರು ಸಿದ್ಧಾಂತ ಸಿಖಾಮಣಿ ಬಗ್ಗೆ, ಸಿದ್ಧಾಂತ ಶಿಖಾಮಣಿ ಓದುವವರು ವಚನ ಸಾಹಿತ್ಯದ ಬಗ್ಗೆ ಹಾಗೂ ಇವೆರಡನ್ನು ಓದುವವರು ಶಿವಾನುಭವವನ್ನು ಅಲ್ಲಗಳೆಯುವುದು ಸಲ್ಲದು. ಎಲ್ಲರೂ ಮೂರು ಸಾಹಿತ್ಯವನ್ನು ಪುರಸ್ಕರಿಸಿದರೆ, ಆಗ ವೀರಶೈವ-ಲಿಂಗಾಯತ ಒಂದು. ವಿಶ್ವವೇ ನಮ್ಮ ಬಂಧು ಎಂದು ನಮ್ಮನ್ನು ನಾವು ಉನ್ನತೀಕರಿಕೊಳ್ಳಲು ಸಾಧ್ಯವಾಗಲಿದೆ ಎಂದ ಶ್ರಿಶೈಲ ಜಗದ್ಗುರುಗಳು, ರೇಣುಕರಾಗಿರಬಹುದು, ಬಸವಾದಿ ಶಿವ ಶರಣರಾಗಿರಬಹುದು, ಪಂಚ ಪೀಠಗಳ ಪರಂಪರೆ ಆಗಿರಬಹುದು, ವಿರಕ್ತ ಪರಂಪರೆ ಆಗಿರಬಹುದು ಎಲ್ಲ ಸಿದ್ದಾಂತಗಳು ಗುರು ಲಿಂಗ ಜಂಗಮವೇ ಆಗಿದೆ. ಆದ್ದರಿಂದ ನಾವು ಒಬ್ಬರಿಗೊಬ್ಬರು ಸಂಕುಚಿತ ಮನೋಭಾವನೆ ತಾಳದೇ ಒಂದಾಗಿ ಸಮಾಜವನ್ನು ವಿಶ್ವವನ್ನೇ ಎತ್ತರಕ್ಕೆ ಕೊಂಡೊಯ್ಯುವತ್ತ ಕಾರ್ಯ ಮಾಡಬೇಕು. ಆಗ ನಿಜವಾದ ರೇಣುಕರ ಜಯಂತಿ ಆಗಲಿದೆ ಎಂದರು.

ಆಶೀರ್ವಚನಕ್ಕೂ ಮುಂಚೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗರಗ ಕಲ್ಮಠದ ಪ್ರಶಾಂತ ದೇವರು ಮಾತನಾಡಿ, ಸರ್ಕಾರದ ಜೊತೆಯಾಗಿಯೇ ಸಮಾಜದ ಜನರಲ್ಲಿ ರೇಣುಕರ ಬಗ್ಗೆ ಅವರ ಕಾರ್ಯಗಳ ಬಗ್ಗೆ ಪ್ರಚುರ ಪಡಿಸುವ ರೇಣುಕಾಚಾರ್ಯರ ಜಯಂತಿ ಉತ್ಸವ ಸಮಿತಿ ಕಾರ್ಯ ಶ್ಲಾಘನೀಯ. ಈ ಮೂಲಕ ನಾವೆಲ್ಲರೂ ಸಮಾಜದ ಅಭಿವೃದ್ಧಿಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಸಮಾಜದ ಮಹಿಳೆಯರಿಂದ ಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಿತು.

ಉತ್ಸವ ಸಮಿತಿ ಮುಖಂಡರಾದ ಸರೋಜಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಹಿರೇಮಠ ಸ್ವಾಗತಿಸಿದರು. ಮಾಜಿ ಶಾಸಕ ಅಮೃತ ದೇಸಾಯಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಸ್‌.ಆರ್‌. ರಾಮನಗೌಡರ, ರಾಜೇಂದ್ರ ಹಿರೇಮಠ ಹಾಗೂ ಪದಾಧಿಕಾರಿಗಳಿದ್ದರು. ಸಮಾರಂಭಕ್ಕೂ ಮುಂಚೆ ಹೊಸಯಲ್ಲಾಪೂರ ಮಳೇಮಲ್ಲೇಶ್ವರ ಸಂಸ್ಥಾನ ಹಿರೇಮಠದಿಂದ ರೇಣುಕರ ಮೂರ್ತಿ ಮೆರವಣಿಗೆ ಅದ್ಧೂರಿಯಿಂದ ನಡೆಯಿತು.