ಕಲಘಟಗಿ:
ಸಾಧು-ಸತ್ಪರುಷರು ಜನತೆಯನ್ನು ಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ದಿದ್ದಾರೆ. ಅವರಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಮೊದಲ ಜಗದ್ಗುರುಗಳಾದ ರೇಣುಕಾಚಾರ್ಯರು ಒಬ್ಬರು ಎಂದು ಶಿರಕೋಳ ಶಿವಾಚಾರ್ಯ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಹನ್ನೆರಡು ಮಠದಲ್ಲಿ ಶ್ರೀಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೇಣುಕಾಚಾರ್ಯರು ಬೋಧಿಸಿದ ಧರ್ಮ ತತ್ವಗಳನ್ನು ಸಾರುವ ಸಿದ್ಧಾಂತ ಶಿಖಾಮಣಿ ಕೃತಿಯ ಮಹತ್ವವನ್ನು ಸಾರುವ ದಿನವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಧರ್ಮವೆಂದರೆ ಸಮಾಜದಲ್ಲಿ ಯಾರಿಗೂ ಕೇಡನ್ನು ಬಯಸದೆ ಮಾನವ ಕಲ್ಯಾಣಕ್ಕಾಗಿ ಬದುಕುವುದು. ಧರ್ಮದ ಹೆಸರಿನಲ್ಲಿ ಎಲ್ಲರೂ ಜಗತ್ ಕಲ್ಯಾಣ ಕಾರ್ಯ ಮಾಡಬೇಕೆಂದು ಕರೆ ನೀಡಿದರು.ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಆದಿ ಜಗದ್ಗುರು ರೇಣುಕಾಚಾರ್ಯರ ನೂತನ ಮೂರ್ತಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಎಸ್.ವಿ. ತಡಸಮಠ, ಎಂ.ಸಿ. ಹಿರೇಮಠ, ಸಿ.ಬಿ. ಹೊನ್ನಿಹಳ್ಳಿ, ಹರಿಶಂಕರ ಮಠದ, ನಿಂಗಪ್ಪ ಸುತಗಟ್ಟಿ, ಬಸವರಾಜ ತಿಪ್ಪಣ್ಣವರ, ಮಲ್ಲಯ್ಯಸ್ವಾಮಿ ತೋಟಗಂಟಿ, ಬಸಯ್ಯ ಹಿರೇಮಠ, ಸಿ.ಬಿ. ಹೊನ್ನಿಹಳ್ಳಿ, ಬಾಳು ಖಾನಾಪೂರ, ಎಲ್ಲಾರಿ ಸಿಂಧೆ. ಐ.ಸಿ. ಗೋಕುಲ, ಗಂಗಾಧರ ಚಿಕ್ಕಮಠ, ಸಾಗರ ಸೂತಾರ, ಮಹಾಂತೇಶ ವಿರಕ್ತಿಮಠ, ಸಂಗಯ್ಯ ತೋಟಗಂಟಿ, ಶಂಕರಗೌಡ ಭಾವಿಕಟ್ಟಿ ಸೇರಿದಂತೆ ಹಲವರಿದ್ದರು.