ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ವಿಶ್ವಗುರು ಬಸವಣ್ಣನವರಿಗಿಂತ ಮೊದಲೇ ಜಗದ್ಗುರು ರೇಣುಕಾಚಾರ್ಯರು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ರಚಿಸಿದ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಅತ್ಯಂತ ಶ್ರೇಷ್ಠವಾದದ್ದು ಎಂಬುವುದನ್ನು ಪ್ರತಿಪಾದಿಸಿದ್ದಾರೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾoವ ಹೇಳಿದರು.ಇಲ್ಲಿನ ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠ ಹಾಗೂ ಮಾತೋಶ್ರೀ ಗೌರಮ್ಮ ಗಂಗಾಧರ ಪ್ರತಿಷ್ಠಾನದ ಸಹಯೋಗದಲ್ಲಿ ಸೋಮವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ, ಮಕ್ಕಳ ಸಂಸ್ಕೃತಿಕ ಸಂಭ್ರಮದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಒಂದು ಜಾತಿ ಮತಕ್ಕೆ ಸೀಮಿತವಾಗದೇ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯತೆಯ ಸಿದ್ಧಾಂತಗಳನ್ನು ಪಾಲಿಸೋಣ. ನಾವೆಲ್ಲರೂ ಸಮಾನತೆಯಿಂದ ಬದುಕುವ ಮೂಲಕ ಮುಂದಿನ ಪೀಳಿಗೆಗೆ ಅವರ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಡೋಣ ಎಂದರು.ನಿವೃತ್ತ ಶಿಕ್ಷಕ ಡಿ.ಎಸ್.ಕುಂಬಾರ ಮಾತನಾಡಿ, ಮನುಕುಲದ ಕಲ್ಯಾಣಕ್ಕಾಗಿ ಅನೇಕ ಮಹಾತ್ಮರು ಶ್ರಮಿಸಿದ್ದಾರೆ. ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತಿಯೊಂದಿಗೆ ಸಮಾಜಮುಖಿ ಸೇವೆಯನ್ನು ಮಾಡುವ ಸಾಧಕರನ್ನು ಗುರುತಿಸಿ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಮುರಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠದ ಕಾರ್ಯಾ ಶ್ಲಾಘನೀಯ ಎಂದು ತಿಳಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಸಮಾಜದ ಒಳಿತಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ತತ್ವದಾರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಕೂಡ ಸುಂದರವಾಗುತ್ತದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ನಮ್ಮ ಸಂಸ್ಥೆಯು ಗ್ರಾಮೀಣ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಸಂಸ್ಥೆಯ ಮೂಲಕ ಅನೇಕ ಸಮಾಜಮುಖಿ ಸೇವೆಗಳ ಜೊತೆಗೆ ಸಮಾಜದ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಸಮಾಜ ಸೇವಾರತ್ನ ಪ್ರಶಸ್ತಿ ನೀಡುವ ಮೂಲಕ ಅವರ ಕಾಯಕವನ್ನು ಪ್ರೋತ್ಸಾಹಿಸುತ್ತಿದ್ದೇವೆ. ಪ್ರಶಸ್ತಿ ಸ್ವೀಕರಿಸಿದ ಎಲ್ಲ ಸಾಧಕರಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು. ಶಿವಪಂಚಾಕ್ಷರಿ ಸ್ವಾಮೀಜಿ, ಡಾ.ಕಾಡಯ್ಯ ಸ್ವಾಮೀಜಿ, ಬಾಬುರಾವ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ರಾಯಬಾಗ ಮಾಜಿ ಶಾಸಕ ಬಿ.ಸಿ.ಸರಿಕರ, ಜಮಖಂಡಿಯ ಕೃಷಿತಜ್ಞ ಶ್ರೀಶೈಲ ಗುಂಡಗಿ, ಸಿಂಡಿಕೇಟ್ ಸದಸ್ಯ ಸೈದಪ್ಪ ಮಾದರ, ಪ್ರಗತಿಪರ ರೈತ ಚಂದ್ರಶೇಖರ ರೋಡಗಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕಗಳು ಜರುಗಿದವು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಪರಗೌಡ ಪಾಟೀಲ, ನ್ಯಾಯವಾದಿ ಎನ್.ಕೆ.ಪಾಟೀಲ, ಪ್ರಾಧ್ಯಾಪಕ ಪ್ರಮೋದ, ಹಳಿಮನಿ, ಸುನಿತಾ ದೇವಮಾನೆ, ಎಂ.ಎನ್.ವಾಲಿ, ಎಂ.ಎಸ್.ಕೋಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.