ಮನುಕುಲ ಒಳಿತು ಬಯಸಿದ್ದ ರೇಣುಕಾಚಾರ್ಯ ಶ್ರೀ

| Published : Mar 24 2024, 01:36 AM IST

ಸಾರಾಂಶ

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದ್ಘೋಷವನ್ನು ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಾಡಿ, ಮನುಕುಲದ ಒಳಿತನ್ನು ಬಯಸಿದರು ಎಂದು ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಂ.ಪಂಚಾಕ್ಷರಯ್ಯ ಬೈರನಹಳ್ಳಿ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದ್ಘೋಷವನ್ನು ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಾಡಿ, ಮನುಕುಲದ ಒಳಿತನ್ನು ಬಯಸಿದರು ಎಂದು ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಂ.ಪಂಚಾಕ್ಷರಯ್ಯ ಬೈರನಹಳ್ಳಿ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆ ಕಾಣಬೇಕು, ಮೇಲು, ಕೀಳು ಭಾವನಯೆನ್ನು ತೊಲಗಿಸಿ, ಎಲ್ಲರೂ ಮಾನವತ್ವವನ್ನು ಹೊಂದಿ ಮನುಷ್ಯರಾಗಿ ಬಾಳುವಂತೆ ವಿಶ್ವದ ಮನುಕುಲಕ್ಕೆ ಸಾರಿದರು ಎಂದು ಹೇಳಿದರು.

ಧರ್ಮಾಚರಣೆ ಕಾರ್ಯ ಕೈಗೊಂಡ ಜಗದ್ಗುರು ರೇಣುಕಾಚಾರ್ಯರು ಭಾರತದಲ್ಲಿ ಶ್ರೀಮದ್‍ ರಂಭಾಪುರಿ, ಶ್ರೀಮದ್ ಉಜೈಯಿನಿ, ಶ್ರೀಮದ್ ಕೇದಾರ, ಶ್ರೀಮದ್ ಶ್ರೀಶೈಲ ಹಾಗೂ ಶ್ರೀಮದ್ ಕಾಶಿ ಎಂಬ ಪಂಚಪೀಠಗಳನ್ನು ಸ್ಥಾಪಿಸಿ, ಪ್ರತಿ ಪೀಠಕ್ಕೆ ಜಗದ್ಗುರು ನೇಮಕ ಕೈಗೊಂಡು, ಪೀಠಗಳು ಸದಾ ಧರ್ಮಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪುರಂದರ ಮಾತನಾಡಿ, ಮನುಷ್ಯ ಯಾವುದೇ ಧರ್ಮದಲ್ಲಿ ಹುಟ್ಟಿದ್ದರೂ ವಿಶ್ವ ಮಾನವ ಧರ್ಮ ಪರಿಪಾಲನೆ ಮಾಡಬೇಕು. ಜಗದ್ಗುರು ರೇಣುಕಾಚಾರ್ಯರು ಸದಾ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸುವುದು ನಮ್ಮ ಧರ್ಮವಾಗಬೇಕು. ಸರ್ಕಾರದಿಂದ ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದು ಸರಿಯಷ್ಟೆ, ಎಲ್ಲ ಮಹಾತ್ಮರ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಹಾತ್ಮರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಬೇಡ ಜಂಗಮ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಸ್ವಾಮಿ, ಉಪಾಧ್ಯಕ್ಷ ಬಸಯ್ಯ, ಸಮಾಜದ ಹಿರಿಯ ಮುಖಂಡರಾದ ಎಚ್.ಎಂ. ಗಂಗಾಧರಯ್ಯ, ಕುಳಗಟ್ಟೆ ಪರಮೇಶ್ವರಯ್ಯ, ಎಂ.ಶಿವಶಂಕರಯ್ಯ, ನಾಗರಾಜಯ್ಯ, ಸಾಲಿಮಠ, ದಯಾನಂದಸ್ವಾಮಿ, ಕೊಟ್ರಸ್ವಾಮಿ, ಎ.ಜಿ.ಸುನಂದ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಂ.ಎಸ್. ಶಾಸ್ತ್ರಿ ಹೊಳೆಮಠ ಸ್ವಾಗತಿಸಿ, ನಿರೂಪಿಸಿದರು.

- - - -23ಎಚ್.ಎಲ್.ಐ1:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು.