ಸಿದ್ಧಾಂತಗಳಿಂದ ಸಮಾಜಕ್ಕೆ ಬೆಳಕಾದ ರೇಣುಕಾಚಾರ್ಯರು

| Published : Mar 13 2025, 12:45 AM IST

ಸಿದ್ಧಾಂತಗಳಿಂದ ಸಮಾಜಕ್ಕೆ ಬೆಳಕಾದ ರೇಣುಕಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಗದ್ಗುರು ರೇಣುಕಾಚಾರ್ಯರು ಸಮಾಜದ ಓರೆಕೋರೆಗಳನ್ನು ತಿದ್ದುತ್ತ ತಮ್ಮ ತತ್ವಸಿದ್ದಾಂತಗಳ ಮೂಲಕ ಸಂದೇಶ ಸಾರಿ ಇಡೀ ಸಮಾಜಕ್ಕೆ ಬೆಳಕಾದವರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಗದ್ಗುರು ರೇಣುಕಾಚಾರ್ಯರು ಸಮಾಜದ ಓರೆಕೋರೆಗಳನ್ನು ತಿದ್ದುತ್ತ ತಮ್ಮ ತತ್ವಸಿದ್ದಾಂತಗಳ ಮೂಲಕ ಸಂದೇಶ ಸಾರಿ ಇಡೀ ಸಮಾಜಕ್ಕೆ ಬೆಳಕಾದವರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರು ತಮ್ಮ ತತ್ವ, ಸಿದ್ದಾಂತಗಳಿಂದ ಜಗತ್ತಿಗೆ ಶಾಂತಿ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಮಾನವ ಜನಾಂಗದ ಏಳಿಗೆಗಾಗಿ, ಸಮಾಜದಲ್ಲಿನ ನ್ಯೂನ್ಯತೆಗಳನ್ನು, ಮೌಢ್ಯತೆಗಳನ್ನು ತೊಲಗಿಸಲು, ಜಗದ್ಗುರು ರೇಣುಕಾಚಾರ್ಯರು ಸಮಾಜಕ್ಕೆ ಸನ್ಮಾರ್ಗ ತೋರಿದರು. ಈ ಮಹನೀಯರ ತತ್ವಾದರ್ಶ ಅವರ ವಿಚಾರಗಳು ಸಾರ್ವಕಾಲಿಕವಾಗಿಯೂ ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಯುವ ಪೀಳಿಗೆ ಮಹನೀಯರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಮಹಾದೇವಯ್ಯ ಶಾಸ್ತ್ರೀ, ಜಗದ್ಗುರು ರೇಣುಕಾಚಾರ್ಯರು ಸರ್ವರ ಒಳತಿಗಾಗಿ ಶ್ರಮಿಸಿದ್ದರು. ಮೌಢ್ಯತೆಯನ್ನು ತೊರೆದು ಉತ್ತಮ ಬದುಕು ಕಟ್ಟಿಕೊಳ್ಳುವ ದಿಸೆಯಲ್ಲಿ ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕು. ನಾವೆಲ್ಲ ಸಹಬಾಳ್ವೆಯಿಂದ ಬದುಕುವ ನಿಟ್ಟಿನಲ್ಲಿ ಜಗದ್ಗುರು ರೇಣುಕಾಚಾರ್ಯರು ಸಮಾಜಕ್ಕೆ ಚಿಂತನೆಗಳ ಮೂಲಕ ಸಂದೇಶ ನೀಡಿದ್ದಾರೆ ಎಂದರು.

ಮಾಳವಿಕಾ ಜೋಶಿ ಸುಗಮ ಸಂಗೀತ ನಡೆಸಿಕೊಟ್ಟರು. ಅಧಿಕಾರಿಗಳಾದ ವೈ.ಎ.ನಾರಾಯಣಕರ, ಎ.ಬಿ.ಅಲ್ಲಾಪುರ, ಸಂತೋಷ ಭೋವಿ, ಡಿ.ಎಸ್.ಧನಗರ, ಸಂಜೀವ ಹಿರೇಮಠ, ಎಸ್.ಎಸ್.ಹಿರೇಮಠ, ಗುರು ಗಚ್ಚಿನಮಠ, ಎನ್.ಆರ್‌.ಮಠ, ವಿಜಯಕುಮಾರ ಹಿರೇಮಠ, ಚಿದಾನಂದ ಹಿರೇಮಠ, ಪುಷ್ಪಾ ಹಿರೇಮಠ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಮೆರವಣಿಗೆ: ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮೆರವಣಿಗೆ ಕಂದಗಲ್ಲ ಹನುಮಂತರಾಯ ರಂಗಮಂದಿರ ತಲುಪಿತು.

ಈ ಸಂದರ್ಭದಲ್ಲಿ ಜಿಪಂ ಯೋಜನಾ, ಅಂದಾಜು ಮತ್ತು ಮೌಲ್ಯ ಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿದ್ಯಾವತಿ ಅಂಕಲಗಿ, ದೇವೆಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ ಮುಂತಾದವರು ಹಾಜರಿದ್ದರು.