ಅನಾರೋಗ್ಯ: ಹರಿಹರ ತವರು ಮನೆಗೆ ಬಂದ ರೇಣುಕಾಸ್ವಾಮಿ ಪತ್ನಿ ಸಹನಾ

| Published : Sep 06 2024, 01:05 AM IST

ಸಾರಾಂಶ

ದರ್ಶನ್ ಗ್ಯಾಂಗ್‌ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಪತ್ನಿ ಸಹನಾ ಆರೋಗ್ಯದಲ್ಲಿ ಗುರುವಾರ ಏರುಪೇರಾಗಿದೆ.

- ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾಗಿರುವ ಪತಿ ಫೋಟೋ ಕಂಡು ತೀವ್ರ ಭಾವುಕ - 3 ತಿಂಗಳಿನಿಂದ ಚಿತ್ರದುರ್ಗದಲ್ಲಿ ಗಂಡನ ಮನೆಯಲ್ಲಿದ್ದ 7 ತಿಂಗಳ ಗರ್ಭಿಣಿ ಸಹನಾ

- ಗರ್ಭದಲ್ಲಿರುವ ಕೂಸಿನ ಬೆಳವಣಿಗೆ ಕುಂಠಿತವಾಗಿದ್ದು, 2 ವಾರ ವಿಶ್ರಾಂತಿಗೆ ಸೂಚನೆ

- ಹಾಸಿಗೆಯಿಂದ ಮೇಲೇಳಲು ಆಗದಷ್ಟು ಅಸ್ವಸ್ಥಗೊಂಡಿರುವ ಸಹನಾ ರೇಣುಕಾಸ್ವಾಮಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದರ್ಶನ್ ಗ್ಯಾಂಗ್‌ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಪತ್ನಿ ಸಹನಾ ಆರೋಗ್ಯದಲ್ಲಿ ಗುರುವಾರ ಏರುಪೇರಾಗಿದೆ.

ಹರಿಹರದ ನಗರದಲ್ಲಿ ತವರು ಮನೆ ಹೊಂದಿರುವ ಸಹನಾ ಕಳೆದ 3 ತಿಂಗಳಿನಿಂದಲೂ ಚಿತ್ರದುರ್ಗದ ಗಂಡ ರೇಣುಕಾಸ್ವಾಮಿ ಮನೆಯಲ್ಲಿದ್ದರು. ಗಂಡನ ಹತ್ಯೆಯಿಂದ ಘಾಸಿಗೊಳಗಾಗಿರುವ 7 ತಿಂಗಳ ಗರ್ಭಿಣಿ ಸಹನಾ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದುದರಿಂದ ಹರಿಹರದ ತವರು ಮನೆಗೆ ಕರೆ ತರಲಾಗಿದೆ.

ಕಳೆದೊಂದು ವಾರದಿಂದಲೂ ಸಹನಾ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ವಾತಾವರಣ ಬದಲಾಗಲೆಂಬ ಕಾರಣಕ್ಕೆ ತುಂಬು ಗರ್ಭಿಣಿ ಸಹನಾಗೆ ಎರಡೂ ಕುಟುಂಬದ ಹಿರಿಯರು ಚರ್ಚಿಸಿ, ತವರು ಮನೆಗೆ ಕರೆ ತಂದಿದ್ದರು. ಸಹನಾ ತಪಾಸಣೆ ಮಾಡಿದ್ದ ವೈದ್ಯರು ಗರ್ಭದಲ್ಲಿರುವ ಕೂಸಿನ ಬೆಳವಣಿಗೆ ಕುಂಠಿತವಾಗಿದೆ. ಕನಿಷ್ಠ 2 ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಕಳೆದ 3 ತಿಂಗಳಿನಿಂದಲೂ ಚಿತ್ರದುರ್ಗದಲ್ಲಿ ಗಂಡನ ಮನೆಯಲ್ಲಿದ್ದ ಸಹನಾ ಇದೇ ಮೊದಲ ಸಲ ತವರು ಮನೆಗೆ ಬಂದು ವಾಸ್ತವ್ಯ ಮಾಡಿದ್ದಾರೆ. ಹಾಸಿಗೆಯಿಂದ ಏಳುವುದಕ್ಕೂ ಆಕೆ ತ್ರಾಸಪಡುತ್ತಿದ್ದಾರೆಂದು ಹೇಳಲಾಗಿದೆ.

ದರ್ಶನ್ ಗ್ಯಾಂಗ್‌ನಿಂದ ಹಲ್ಲೆಗೊಳಗಾಗಿ ಜೀವರಕ್ಷಣೆಗೆ ಅಂಗಲಾಚುತ್ತಿರುವ ಪತಿಯ ಫೋಟೋ ನೋಡಿ ಸಹನಾ ಭಾವುಕರಾಗುತ್ತಿದ್ದಾರೆ. ಫೋಟೋ ವೈರಲ್ ಆಗಿರುವುದನ್ನು ಕಂಡು ಕಣ್ಣೀರಿಟ್ಟ ಸಹನಾ ತನ್ನ ಪತಿ ರೇಣುಕಾ ಸ್ವಾಮಿಗೆ ದರ್ಶನ್ ಗ್ಯಾಂಗ್ ಕ್ಷಮಿಸಬೇಕಾಗಿತ್ತು ಎಂದು ಕಣ್ಣೀರು ಸುರಿಸಿದರು.

ರೇಣುಕಾಸ್ವಾಮಿ ಹತ್ಯೆ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಮಾವ ಸೋಮನಾಥ್ ಇದೇ ವೇಳೆ ಒತ್ತಾಯಿಸಿದರು.

- - -