ವಿಐಎಸ್‌ಎಲ್‌ ಉಳಿವು ಸುನಾಮಿ ವಿರುದ್ಧ ಈಜಿದ ಹಾಗೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

| Published : Sep 06 2024, 01:05 AM IST

ವಿಐಎಸ್‌ಎಲ್‌ ಉಳಿವು ಸುನಾಮಿ ವಿರುದ್ಧ ಈಜಿದ ಹಾಗೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯೊಂದಿಗಿನ ಮೈತ್ರಿ ಲೋಕಸಭೆಗೆ ಮಾತ್ರ ಎಂದು ಮಾಡಿಕೊಂಡಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೈತ್ರಿ ಮುಂದುವರೆಯಲಿದೆ‌ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಸುನಾಮಿ ವಿರುದ್ಧ ಈಜುವ ಪರಿಸ್ಥಿತಿ ಇದೆ. ಕಾರ್ಖಾನೆ ಪುನರುಜ್ಜೀವನಗೊಳಿಸಲು ಸುಮಾರು 15 ಸಾವಿರ ಕೋಟಿ ರು. ಬಂಡವಾಳಬೇಕು. ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದ ಈ ಕಾರ್ಖಾನೆಯ ಉಳಿವಿಗೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಲವು ವರ್ಷದಿಂದಲೂ ವಿಐಎಸ್ಎಲ್ ಕಾರ್ಖಾನೆ ವಿಚಾರದಲ್ಲಿ ಹಲವು ಲೋಪಗಳಾಗಿವೆ. ನಾನು ಈ ವಿಚಾರದಲ್ಲಿ ಯಾರನ್ನೂ ದೂಷಿಸಲಾರೆ. ಆದರೆ, ಸಾವಿರಾರು ಜನರಿಗೆ ಅನ್ನ ಕೊಟ್ಟಿರುವ ಕಾರ್ಖಾನೆಗೆ ಮರುಜೀವ ಕೊಡುವ ಕೆಲಸ ಮಾಡ್ತಾ ಇದ್ದೀನಿ. ಅದರ ಶ್ರಮ ನನಗೆ ಮಾತ್ರ ಗೊತ್ತು. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳು ಖಾಸಗೀಕರಣ ಮಾಡುವ ತೀರ್ಮಾನ ಆಗಿದ್ದರೂ, ವಿಐಎಸ್‌ಎಲ್‌ ಉಳಿಸುವ ನನ್ನ ಪ್ರಯತ್ನ ನಿಲ್ಲಿಸಿಲ್ಲ. ಇಂತಹ ಕೆಲಸಳಿಗೆ ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವುದು ಬಹಳ ಮುಖ್ಯ ವಾಗಿದ್ದು, ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ ಕೇಂದ್ರದ ಯಾವುದೇ ಯೋಜನೆ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರದ ಸಹಕಾರ ಅತಿ ಮುಖ್ಯ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಗ್ಯಾರಂಟಿ ಬಗ್ಗೆ ವಿರೋಧವೂ ಇಲ್ಲ. ಆದರೆ, ಅಭಿವೃದ್ಧಿ ಕೂಡ ಆಗಬೇಕು. ನೀರಾವರಿ ಯೋಜನೆ, ರಸ್ತೆ ಕಾಮಗಾರಿಗಳು ಸೇರಿ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಹಿಂದುಳಿದ ವರ್ಗದ ಜನಾಂಗದಿಂದ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಹಿಂದುಳಿದವರ ಕಲ್ಯಾಣಕ್ಕೆ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ, ಶಾರದ ಅಪ್ಪಾಜಿ ಗೌಡ ಇದ್ದರು.ಕುದುರೆಮುಖ ಮೈನಿಂಗ್ ಕಂಪನಿಗೆ 1700 ಕೋಟಿ ರು. ಬಿಡುಗಡೆಗೆ ನಾನು ಸಹಿ ಹಾಕಿದ್ದೇನೆ. ಅರಣ್ಯ ಸಚಿವರಿಗೆ ತಲೆಬುಡ ಗೊತ್ತಿಲ್ಲ. ಸಣ್ಣಪುಟ್ಟ ದೋಷ ಇದ್ದರೆ ಸರಿ ಮಾಡಿಕೊಡ್ತೀವಿ ಅಂತ ಕುದುರೆಮುಖ ಮೈನಿಂಗ್‌ ಕಂಪನಿಯವರು ಹೇಳಿದ್ದಾರೆ. ಕುದುರೆಮುಖ ಮೈನಿಂಗ್‌ ಕಂಪನಿಗೆ ದಿನಕ್ಕೆ 27 ಕೋಟಿ ನಷ್ಟ ಆಗುತ್ತಿದೆ. ನಮ್ಮ ಮೇಲೆ ದ್ವೇಷ ಇದ್ರೆ ಬೇರೆ ರೀತಿ ತೀರಿಸಿ ಕೊಳ್ಳಿ. ನಮ್ಮ ಮೇಲಿನ ದ್ವೇಷಕ್ಕೆ ಕಾರ್ಮಿಕರನ್ನು ಏಕೆ ಬೀದಿಗೆ ತರ್ತೀರಾ? ಎಂದು ಎಚ್.ಡಿ.ಕುಮಾರಸ್ವಾಮಿ, ಪ್ರಶ್ನಿಸಿದರು.ರಾಜ್ಯದಲ್ಲಿ ಸರ್ಕಾರದ ಹಗರಣಗಳೇ ಮುನ್ನೆಲೆಗೆ

ಸರ್ಕಾರದ ಯೋಜನೆ ಜಾರಿಯಲ್ಲೂ ಹಲವು ಲೋಪ-ದೋಷಗಳಾಗುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೊದಲ ವರ್ಷ ದಲ್ಲೇ ಸರ್ಕಾರದ ಬಗ್ಗೆ ಟೀಕೆ‌-ಟಿಪ್ಪಣೆಗಳು ಶುರುವಾಗಿವೆ ಎಂದು ಎಚ್.ಡಿ.ಕುಮಾರ್‌ ಟೀಕಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ವರ್ಗಾವಣೆ. ನಿಗಮಗಳ ಹಗರಣಗಳೇ ಮುನ್ನೆಲೆಗೆ ಬಂದಿವೆ. ಜನರ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ‌ ಎಂದು ಆರೋಪಿಸಿದರಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಗೊಳ್ಳಿ ರಾಯಣ್ಣರನ್ನು ಹೋಲಿಕೆ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ನಮ್ಮ ಪಕ್ಷದವರೇ ತನ್ನ ವಿರುದ್ಧ ಷಡ್ಯಂತ್ರ ಮಾಡುವ ಮೂಲಕ ಅಧಿಕಾರದಿಂದ ಇಳಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿ ಕೊಂಡಿದ್ದಾರೆ ಎಂದು ಟಾಂಗ್‌ ನೀಡಿದರು. ಗುಂಡಿ ಮುಚ್ಚಲೂ ಸರ್ಕಾರದ ಬಳಿ ಹಣವಿಲ್ಲ:ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಒಂದು ರಸ್ತೆಯ ಗುಂಡಿ ಮುಚ್ಚಲು ಆಗುತ್ತಿಲ್ಲ.‌ ಕಂದಾಯ ಸಚಿವರೇ ಏನಾದರೂ ಮಾಡಿ ಗುಂಡಿ‌ಮುಚ್ಚಿ ಎಂದು ಅಧಿಕಾರಿಗಳಿಗೆ ಕೈ ಮುಗಿದು ಕೇಳುಕೊಳ್ಳುವ ದಾರುಣ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗದ ಪರಿಸ್ಥಿತಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೈತರ ಸಾಲ‌ಮನ್ನ ಮಾಡಿದೆ. ಆದರೂ ಅಭಿವೃದ್ಧಿ ಕಾರ್ಯವನ್ನು ಯಾವತ್ತೂ‌ ನಿಲ್ಲಿಸಲಿಲ್ಲ‌. ಸಾಲಮನ್ನಾ ಜೊತೆಗೆ ಅಭಿವೃದ್ಧಿ ಮಾಡಿದ್ದರಿಂದ ಸರ್ಕಾರ ಉಳಿದಿತ್ತು ಎಂದು ತಿಳಿಸಿದರು.

ಕೋವಿಡ್ ರಿಪೋರ್ಟ್‌ ಬಗ್ಗೆ ಗೊತ್ತಿಲ್ಲ,

ಕ್ಯಾಬಿನೆಟ್ಟಲ್ಲಿ ಚರ್ಚೆಯಾಗಲಿ: ಎಚ್ಡಿಕೆ

ಶಿವಮೊಗ್ಗ: ಕೋವಿಡ್ ರಿಪೋರ್ಟ್ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್‌ನಲ್ಲಿ ಇಟ್ಟು ಅದನ್ನು ಚರ್ಚೆ ಮಾಡಲಿ. ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೇ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಹಿನ್ನೆಲೆಯಲ್ಲಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮದವರೇ ಎಲ್ಲಾ ಹೇಳ್ತಿದ್ದಾರೆ. ಈಗಾಗಲೇ ಹೈಕೋರ್ಟ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಗಿದೆ. ಸಿದ್ದರಾಮಯ್ಯ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳುತ್ತಿದ್ದಾರೆ ಎಂದರು.ವಿಐಎಸ್‌ಎಲ್ ನಿರ್ವಹಣೆಗೆ 10 ರಿಂದ15 ಸಾವಿರ ಕೋಟಿ ಬೇಕು. ವಿಐಎಸ್ಎಲ್ ಹಾಗೂ ವೈಜಾಕ್ ಬಗ್ಗೆ ನಮಗೆ ಕಮಿಟ್ ಮೆಂಟ್ ಇದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10 ರಿಂದ15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ. ಕನ್ನಡ ಚಿತ್ರರಂಗದಲ್ಲಿ ಮೀಟೂ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೈಗಾರಿಕಾ ಸ್ಮಾರ್ಟ್‌ಸಿಟಿಯಾಗಿ

ಶಿವಮೊಗ್ಗ ಆಯ್ಕೆ ಮಾಡಿ: ಚೆನ್ನಿಶಿವಮೊಗ್ಗ: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಕೈಗಾರಿಕಾ ಸ್ಮಾರ್ಟ್‌ಸಿಟಿಯಾಗಿ ಶಿವಮೊಗ್ಗ ಮಹಾನಗರವನ್ನು ಆಯ್ಕೆ ಮಾಡುವ ಪ್ರಸ್ತಾವನೆಯನ್ನು ನಗರಕ್ಕೆ ಆಗಮಿಸಿದ್ದ ಕೇಂದ್ರದ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕ ಎಸ್.ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.ಭಾರತ ಸರ್ಕಾರವು ಪ್ರಧಾನಿ ನರೇಂದ್ರ ಮೋದೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಗಳ 28602 ಕೋಟಿ ರು.ಗಳ ಅಂದಾಜು ಹೂಡಿಕೆಯೊಂದಿಗೆ ದೇಶದ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಈ ಯೋಜನೆಯು 10 ರಾಜ್ಯಗಳಲ್ಲಿ ವ್ಯಾಪಿಸಿದ್ದು, 1 ಮಿಲಿಯನ್ ಪ್ರತ್ಯಕ್ಷ ಉದ್ಯೋಗಗಳನ್ನು ಮತ್ತು 3 ಮಿಲಿಯನ್ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿರುವುದು ದೇಶದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಕರ್ನಾಟಕ ರಾಜ್ಯವು ಸಹ ಕೈಗಾರಿಕೆ ಕ್ಷೇತ್ರಕ್ಕೆ ಸಾಕಷ್ಟು ರೀತಿಯ ಕೊಡುಗೆ ನೀಡಿದೆ. ಹೊಸ ಹೊಸ ಕೈಗಾರಿಕೆ ಗಳನ್ನು ಸ್ಥಾಪಿಸಲು ಪೂರಕವಾದ ಸಂಪತ್ತು ನಮ್ಮ ರಾಜ್ಯದಲ್ಲಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಶಿವಮೊಗ್ಗ ಮಹಾನಗರವು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ ಯಾಗಿದೆ ಎಂದು ತಿಳಿಸಿದರು.ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ 12 ನಗರಗಳ ಪೈಕಿ 10 ನಗರಗಳನ್ನು ಘೋಷಿಸಿದ್ದು, ಶಿವಮೊಗ್ಗ ನಗರವನ್ನು ಈ ಯೋಜನೆಯಡಿ ಸೇರಿಸಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್ ಸ್ಮಾರ್ಟ್ ಸಿಟಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.2025ರಲ್ಲೇ ಬರಬಹುದಾದ ಚುನಾವಣೆಗೆ ಸಿದ್ಧರಾಗಿ: ಕುಮಾರಸ್ವಾಮಿ

ಶಿವಮೊಗ್ಗ: ಯಾವ ಸಮಯದಲ್ಲಾದರೂ ಚುನಾವಣೆ ಬರಬಹುದು. ಎಲ್ಲದಕ್ಕೂ ಸಿದ್ಧರಾಗಿರಿ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಕುತೂಹಲ ಮೂಡಿಸಿದೆ.

ಗುರುವಾರ ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ಚುನಾವಣೆ 2028ರಲ್ಲೇ ಬರಬಹುದು, 2026ರಲ್ಲಿ ಬರಬಹುದು, 2025ರಲ್ಲೇ ಚುನಾವಣೆ ಬರಬಹುದು. ಯಾವುದಕ್ಕೂ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧರಾಗಿ ಎಂದು ಹೇಳಿದರು.ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳದ ಬೇರು ಗಟ್ಟಿಯಾಗಿದೆ. ಆದರೆ ಪಕ್ಷಕ್ಕೆ ಬಂದು ಚುನಾವಣೆ ನಂತರ ಬಿಟ್ಟು ಹೋಗುತ್ತಿರು ವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಭದ್ರಾವತಿಯ ಅಪ್ಪಾಜಿಗೌಡರ ನಂತರ ಇಬ್ವರು ಸಹೋದರಿಯರಿಂದ ಪಕ್ಷ ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಗಟ್ಟಿಯಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಯುವಕರು, ಬೇರೆ ಸಮಾಜದವರನ್ನು ಹಾಗೂ ಮಹಿಳೆಯರನ್ನು ನೋಂದಣಿ ಮಾಡಲು ತೀರ್ಮಾನಿಸಲಾಗಿದೆ ಎಂದರು.ಜನತೆಯಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಣ್ತಾ ಇಲ್ಲ. ಜನ ಬೇಸತ್ತಿದ್ದಾರೆ. ಮುಂದಿನ ಮೂರೂವರೆ ವರ್ಷಗಳವರೆಗೆ ಅವಧಿ ಇದ್ದರೂ ಕಾಂಗ್ರೆಸ್ ನಾಯಕರ ತಪ್ಪಿನಿಂದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹಳ್ಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರ ಸಮಗ್ರ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟಿಸಿದರೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯಬಹುದು. ಮೈತ್ರಿಗೆ ನಮ್ಮಿಂದ ಯಾವುದೇ ಧಕ್ಕೆ ತರದಂತೆ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.ಪುತ್ರ ನಿಖಿಲ್ ಪಕ್ಷ ಸಂಘನೆ ದೃಷ್ಠಿಯಿಂದ ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕೊಪ್ಪಳದಲ್ಲಿ ಅಭೂತ ಪೂರ್ವ ಕಾರ್ಯ ಕ್ರಮ ನಡೆದಿದೆ. ಇದರಿಂದ ನನಗೆ ನೆಮ್ಮದಿ ತಂದಿದೆ. ನನಗೂ ಶಿವಮೊಗ್ಗಕ್ಕೂ ನಂಟಿದೆ. 2004 ರಲ್ಲಿ ನಡೆದ ಉಪಚುನಾವಣೆ ಯಲ್ಲಿ ಶಿವಮೊಗ್ಗಕ್ಕೆ ಬಂದಿದ್ದೆ. ಆಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಗೆದ್ದಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ, ಶಾರದ ಅಪ್ಪಾಜಿ ಗೌಡ ಸೇರಿದಂತೆ ಹಲವರಿದ್ದರು.