ದರೋಜಿ ಕೆರೆ ತೂಬಿನ ದುರಸ್ತಿ: ನಿಟ್ಟುಸಿರು ಬಿಟ್ಟ ರೈತರು

| Published : Jul 02 2025, 12:20 AM IST

ಸಾರಾಂಶ

ತಾಲೂಕಿನ ದರೋಜಿ ಕೆರೆಯ ತೂಬು ತುಕ್ಕು ಹಿಡಿದು ಬ್ಲಾಕ್ ಆದ ಕಾರಣ, ಕೆರೆಯ ನೀರಿನ್ನು ಅವಲಂಬಿಸಿದ್ದ ರೈತರು ಚಿಂತೆಗೆ ಒಳಗಾಗಿದ್ದರು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ದರೋಜಿ ಕೆರೆಯ ತೂಬು ತುಕ್ಕು ಹಿಡಿದು ಬ್ಲಾಕ್ ಆದ ಕಾರಣ, ಕೆರೆಯ ನೀರಿನ್ನು ಅವಲಂಬಿಸಿದ್ದ ರೈತರು ಚಿಂತೆಗೆ ಒಳಗಾಗಿದ್ದರು.

ಆದರೆ, ಮಂಗಳವಾರ ನೀರಾವರಿ ಇಲಾಖೆ ಅಧಿಕಾರಿಗಳು ಬೆಳಗಾವಿಯಿಂದ ನುರಿತ ತಂತ್ರಜ್ಞರನ್ನು ಕರೆಯಿಸಿ ತೂಬನ್ನು ದುರಸ್ತಿ ಮಾಡಿಸಿ, ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಟ್ಟಿದ್ದರಿಂದ ರೈತರು ನಿಟ್ಟುಸಿರು ಬಿಟ್ಟರು.

೦.೬೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ದರೋಜಿ ಕೆರೆ ತುಂಬಲು ಇನ್ನು ಒಂದು ಅಡಿ ಮಾತ್ರ ಬಾಕಿ ಇದೆ. ಹೊಸ ಮತ್ತು ಹಳೆ ದರೋಜಿ, ಸೋಮಲಾಪುರ ಮುಂತಾದ ಗ್ರಾಮಗಳ ೪೫೦ ಎಕರೆ ಜಮೀನಿಗೆ ಈ ಕೆರೆಯ ನೀರು ಪೂರೈಕೆಯಾಗುತ್ತಿದೆ. ಕೆರೆಯ ನೀರನ್ನು ಬಳಸಿಕೊಂಡು ಈ ಭಾಗದ ರೈತರು ಭತ್ತ ಮತ್ತಿತರ ಬೆಳೆಗಳನ್ನು ಬೆಳೆದುಕೊಳ್ಳುತ್ತಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ನೀರಾವರಿ ಇಲಾಖೆ ಎಇಇ ಶ್ರೀನಿವಾಸ್, ದರೋಜಿ ಕೆರೆ ತುಂಬಲು ಇನ್ನು ಒಂದು ಅಡಿ ಮಾತ್ರ ಬಾಕಿ ಇದೆ. ಈ ಕೆರೆಯ ಸುತ್ತಲಿನ ಗ್ರಾಮಗಳ ೪೫೦ ಎಕರೆ ಜಮೀನಿಗೆ ನೀರನ್ನು ಪೂರೈಸುತ್ತದೆ. ಕೆರೆಯ ತೂಬು ಹಾನಿಗೊಳಗಾಗಿ ಬ್ಲಾಕ್ ಆಗಿದ್ದರಿಂದ ಕೃಷಿಗೆ ನೀರು ಪೂರೈಸಲು ತೊಂದರೆಯಾಗಿತ್ತು. ಬೆಳಗಾವಿಯಿಂದ ಆಗಮಿಸಿದ್ದ ೮ ಜನರ ತಂಡ ಕೆರೆಯ ತೂಬನ್ನು ದುರಸ್ತಿ ಮಾಡಿದೆ. ಈಗ ನೀರು ಸರಾಗವಾಗಿ ಜಮೀನುಗಳಿಗೆ ಪೂರೈಕೆಯಾಗುತ್ತಿದೆ ಎಂದರು.

ಕೆರೆ ತೂಬು ದುರಸ್ತಿಯಾಗಿ ಜಮೀನುಗಳಿಗೆ ನೀರು ಹರಿದಿದ್ದರಿಂದ ಕೆರೆಯ ನೀರಿನ ಮೇಲೆ ಅವಲಂಬಿತರಾಗಿ ಬಿತ್ತನೆಗೆ ಜಮೀನುಗಳನ್ನು ಸಿದ್ದಪಡಿಸಿಕೊಂಡಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.