ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ: ಗೋಕುಲ ಕೈಗಾರಿಕೆ ವಲಯದ ಎಂಟಿ ಸಾಗರ ಹಾಗೂ ಎರಡನೇ ಹಂತದ ಕೈಗಾರಿಕೆ ಪ್ರದೇಶದಲ್ಲಿ ಬೀದಿ ದೀಪಗಳು ದುರಸ್ತಿಯಲ್ಲಿರುವುದು ನಿಜ, ಈ ಸಂಬಂಧ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಂದ ತಕ್ಷಣ ದುರಸ್ತಿ ಪ್ರಕ್ರಿಯೆ ನಡೆಯಲಿದೆ. ಜತೆಗೆ ಗಾಮನಗಟ್ಟಿ ಸೇರಿದಂತೆ ಗೋಕುಲ ವಲಯದಲ್ಲಿ ಮೂಲಭೂತ ಸೌಕರ್ಯಗಳಿಗೆ ಏನೂ ಸಮಸ್ಯೆ ಇಲ್ಲ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.''''ಕೈಗಾರಿಕೆ ಸಂಕಷ್ಟ'''' ಹೆಸರಿನಲ್ಲಿ ನಾಡಿನ ಜನಮನದ ಧ್ವನಿಯಾಗಿರುವ ''''ಕನ್ನಡಪ್ರಭ'''' ಮೇ 11ರಿಂದ ಸಣ್ಣ ಕೈಗಾರಿಕೆಗಳ ಬಗೆಹರಿಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ವರದಿಗೆ ಸ್ಪಂದಿಸಿ ಅವರು ಪ್ರತಿಕ್ರಿಯಿಸಿದರು.
ಸಾವಿರಾರು ಕೋಟಿ ವೆಚ್ಚದಲ್ಲಿ ಸರ್ಕಾರದಿಂದ ಕೆಎಸ್‌ಎಸ್‌ಐಡಿಸಿ ಮತ್ತು ಕೆಐಎಡಿಬಿಯಿಂದ ಕೈಗಾರಿಕೆ ವಲಯ ಅಭಿವೃದ್ಧಿಪಡಿಸಿದ ಬಳಿಕ ನಾವು ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸರ್ಕಾರದ ಮೂಲಕ ಹಸ್ತಾಂತರಿಸುವುದು ನಮ್ಮ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗೋಕುಲ ಕೈಗಾರಿಕೆ ವಲಯದ ಮೊದಲ ಹಂತ 70 ಎಕರೆ ಕೈಗಾರಿಕೆ ಪ್ರದೇಶ ಮಹಾನಗರ ಪಾಲಿಕೆ ಹಸ್ತಾಂತರ ಆಗಿದೆ. ಬೇಲೂರು ಕೈಗಾರಿಕೆ ವಲಯ ಸಹ ಅಲ್ಲಿಯ ಗ್ರಾಮ ಪಂಚಾಯಿತಿಗೆ ಹಸ್ತಾಂತರವಾಗಿದ್ದು, ಸದ್ಯ ಗ್ರಾಮನಗಟ್ಟಿ, ಎಂ.ಟಿ. ಸಾಗರ ಹಾಗೂ ಗೋಕುಲ ಎರಡನೇ ಹಂತದ 50 ಎಕರೆ ಕೈಗಾರಿಕೆ ವಲಯ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.ಹೀಗೆ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ನಾವು ಸೇವಾ ಶುಲ್ಕ ಪಡೆಯುವುದಿಲ್ಲ. ಅಲ್ಲಿಯ ಸ್ಥಳೀಯ ಸಂಸ್ಥೆ ಆಸ್ತಿ ತೆರಿಗೆ ಪಡೆಯುತ್ತದೆ. ಕೆಎಸ್‌ಎಸ್‌ಐಡಿಸಿ ಹುಬ್ಬಳ್ಳಿ ವಿಭಾಗದ ಕಚೇರಿ ವ್ಯಾಪ್ತಿಗೆ ಹಾವೇರಿ, ಧಾರವಾಡ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳು ಒಳಪಡುತ್ತಿದ್ದು, 2500ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳ ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
ನಿರ್ಧಾರದ ಅಧಿಕಾರವಿಲ್ಲ: ಕೆಎಸ್‌ಎಸ್‌ಐಡಿಸಿ ಹುಬ್ಬಳ್ಳಿ ವಿಭಾಗದ ಪ್ರಧಾನ ವ್ಯವಸ್ಥಾಪಕರು ಹಾಗೂ ಕೆಐಎಡಿಬಿ, ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸ್ಥಳೀಯವಾಗಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಹೀಗಾಗಿ ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಆಯಾ ಇಲಾಖೆ ಸಚಿವರು ಸಭೆ ಮಾಡಿ ಜನಹಿತದ ನಿರ್ಧಾರ ಕೈಗೊಳ್ಳಬೇಕು. ಕೈಗಾರಿಕೆ ವಲಯ ಹಸ್ತಾಂತರ ಆಗದೇ ತೆರಿಗೆ ಯಾರಿಗೆ ಕಟ್ಟಬೇಕು ಎಂಬುದು ಅಂತಿಮ ನಿರ್ಧಾರವಾಗಬೇಕು, ಈ ಸಂಬಂಧ ಜನಪ್ರತಿನಿಧಿಗಳ ಸಭೆ ಆಗಿಲ್ಲ. ನಮ್ಮ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ''''ಇನ್ವೆಸ್ಟ್ ಕರ್ನಾಟಕ'''' ಹೆಸರಿನಲ್ಲಿ ಹೊಸ ಹೂಡಿಕೆದಾರರಿಗೆ ರತ್ನಗಂಬಳಿ ಹಾಸುತ್ತಾರೆ. ನಮ್ಮನ್ನು ನಿರ್ಲಕ್ಷಿಸುತ್ತಾರೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಉಪಾಧ್ಯಕ್ಷ ಅಶೋಕ ಕುನ್ನೂರ ನೊಂದು ನುಡಿದರು.ಸರ್ಕಾರ ಕೈಗಾರಿಕೆ ವಲಯ ಸ್ಥಾಪಿಸಿದ ಬಳಿಕ ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಿರ್ವಹಣೆ ಸಂಬಂಧ ಹಸ್ತಾಂತರ ಮಾಡುತ್ತದೆ. ಈ ನಿಟ್ಟಿನಲ್ಲಿ ಹೀಗಾಗಲೇ ಹಲವು ಕೈಗಾರಿಕೆ ವಲಯಗಳ ಹಸ್ತಾಂತರ ಪ್ರಕ್ರಿಯೆ ಈಗ ಪ್ರಗತಿಯಲ್ಲಿದೆ ಎಂದು ಕೆಎಸ್‌ಎಸ್‌ಐಡಿಸಿಯ ಹುಬ್ಬಳ್ಳಿ ವಿಭಾಗದ ಪ್ರಭಾರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿ.ಎಂ. ಚಿಕ್ಕಮಠ ಹೇಳಿದರು. ಹುಬ್ಬಳ್ಳಿ-ಧಾರವಾಡ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ, ಮೂಲಭೂತ ಸೌಕರ್ಯ, ಘನ ತ್ಯಾಜ್ಯ ವಿಲೇವಾರಿ, ಆಸ್ತಿ ತೆರಿಗೆ, ಸೇವಾ ಶುಲ್ಕದ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿ ಬೆಳಕು ಚೆಲ್ಲಿರುವುದು ಉದ್ಯಮಿಗಳಲ್ಲಿ ಖುಷಿ ತಂದಿದೆ. ಕೆಐಎಡಿಬಿ ಮೂಲಕವೇ ಇ-ಸ್ವತ್ತು ಕೊಡುವ ವ್ಯವಸ್ಥೆ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದ್ದಾರೆ. ಪಾಲಿಕೆಯವರು ತೆರಿಗೆ ಕಟ್ಟಿಸುವಾಗ ಡಿಸ್ಕೌಂಟ್ ಮಾಡಬೇಕು, ಇದರಿಂದ ತೆರಿಗೆ ಕಟ್ಟುವವರ ಪ್ರಮಾಣ ಹೆಚ್ಚುತ್ತದೆ. ಪಾಲಿಕೆಗೂ ಆರ್ಥಿಕವಾಗಿ ಸಹಾಯ ಆಗುತ್ತದೆ. 6 ವರ್ಷದ ಆಸ್ತಿ ತೆರಿಗೆ ಕಟ್ಟಿದ ಮೇಲೂ ಬಾಕಿ ಉಳಿಯುವದಿಲ್ಲ ಎಂಬ ನಂಬಿಕೆ ಇಲ್ಲ. ಇವು ನಂಬಿಕೆ ಬರುವ ಹಾಗೆ ಇರಬೇಕು ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ ಹೇಳಿದರು.