ಸಾರಾಂಶ
ಬಾಳೆಹೊನ್ನೂರು : ಹಾನ್‌ಬಾಳು- ಮುಡುಬ ಕೊಗಾಳ್ ಕ್ರಾಸ್ ರಾಜ್ಯ ಹೆದ್ದಾರಿಯ(ಎಸ್‌ಎಚ್ 252) ಜಕ್ಕಣಕ್ಕಿ ಜಾಕ್ಸನ್ ಶಾಲೆಯ ಸಮೀಪದ ಮುಖ್ಯರಸ್ತೆಯಲ್ಲಿ ಸೇತುವೆ ಶಿಥಿಲಗೊಂಡಿದ್ದು, ಕುಸಿತಗೊಳ್ಳುವ ಮುನ್ನ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಆಗ್ರಹಿಸಿದ್ದಾರೆ.
ಜಾಕ್ಸನ್ ಶಾಲೆ ಸಮೀಪದ ತಳಭಾಗದಲ್ಲಿ ಕುಸಿತಗೊಂಡ ಸೇತುವೆಯನ್ನು ಮಂಗಳವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಕ್ಸನ್ ಸೇತುವೆಯು ಶಿಥಿಲಾವಸ್ಥೆಗೆ ತಲುಪಿ ಹಲವು ತಿಂಗಳುಗಳೇ ಕಳೆದರೂ ಸಹ ಈ ಬಗ್ಗೆ ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ಗಮನಹರಿಸಿಲ್ಲ.
ತಳಭಾಗದಲ್ಲಿ ಸೇತುವೆಯು ಸಂಪೂರ್ಣ ಕುಸಿದಿದ್ದು, ಸಂಬಂಧಿಸಿದ ಇಲಾಖೆ ಸೇತುವೆ ಸಮೀಪದಲ್ಲಿ ಕೇವಲ ಅನಾಹುತ ಸಂಭವಿಸುವ ಸ್ಥಳ ಎಂದು ನಾಮಫಲಕವನ್ನು ಮಾತ್ರ ಹಾಕಿದೆ. ಆದರೆ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸೇತುವೆಯು ಸಂಪೂರ್ಣ ಬೀಳುವ ಹಂತದಲ್ಲಿದ್ದು, ತಳಭಾಗದಲ್ಲಿನ ಫಿಲ್ಲರ್ ಕಲ್ಲುಗಳು ಕುಸಿತಗೊಂಡಿವೆ.
ಸೇತುವೆಯ ಮೇಲೆ ಮಾಗುಂಡಿ, ಕೊಟ್ಟಿಗೆಹಾರ, ಕಳಸ, ಹೊರನಾಡು ಮುಂತಾದ ಭಾಗಗಳಿಗೆ ಹೋಗುವ ನೂರಾರು ವಾಹನಗಳು ನಿತ್ಯವೂ ಸಂಚರಿಸುತ್ತಿವೆ. ಭಾರೀ ತೂಕ ಹೊತ್ತ ವಾಹನಗಳು ಸಂಚರಿಸುವಾಗ ಸೇತುವೆ ಸಂಪೂರ್ಣವಾಗಿ ಕುಸಿದರೆ ಪ್ರಾಣಾಪಾಯವಾಗುವುದು ಖಚಿತ. ಇದಲ್ಲದೇ ಕೊಟ್ಟಿಗೆಹಾರ, ಕಳಸ, ಹೊರನಾಡು ಭಾಗಗಳಿಗೆ ತೆರಳುವ ಮುಖ್ಯರಸ್ತೆ ಇದಾಗಿದ್ದು, ಸೇತುವೆ ಕುಸಿತಗೊಂಡರೆ ಸಂಚಾರ ಕಡಿತಗೊಂಡು ಹತ್ತಾರು ಕಿಲೋ ಮೀಟರ್ ಸುತ್ತಿ ಬಳಸಿ ಪರ್ಯಾಯ ರಸ್ತೆಯನ್ನು ಅವಲಂಭಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ತುರ್ತಾಗಿ ಸೂಕ್ತ ಕ್ರಮಕೈಗೊಳ್ಳಬೇಕುನ ಎಂದು ತಿಳಿಸಿದರು.