ಹಾರೋಹಳ್ಳಿ: ಹಾರೋಹಳ್ಳಿಯಿಂದ ಬಿಡದಿಗೆ ಮೇಡಮಾರನಹಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೇಡಮಾರನಹಳ್ಳಿ ಕ್ರಾಸ್ ಬಳಿ ರಸ್ತೆಯ ಮಧ್ಯಭಾಗದಲ್ಲಿರುವ ಕಾವೇರಿ ನೀರಿನ ಪೈಪ್‌ಲೈನ್ ವಾಲ್ವ್‌ ಮೇಲ್ಚಾವಣಿ ಕಲ್ಲು ಒಡೆದಿದೆ. ಈ ಮಾರ್ಗದ ಸಮೀಪ ಕೈಗಾರಿಕಾ ಪ್ರದೇಶವಿದ್ದು, ಪ್ರತಿದಿನ ನೂರಾರು ಭಾರೀ ಮತ್ತು ಸಣ್ಣ ವಾಹನಗಳು ಸಂಚರಿಸುತ್ತವೆ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ

ಹಾರೋಹಳ್ಳಿ: ಹಾರೋಹಳ್ಳಿಯಿಂದ ಬಿಡದಿಗೆ ಮೇಡಮಾರನಹಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೇಡಮಾರನಹಳ್ಳಿ ಕ್ರಾಸ್ ಬಳಿ ರಸ್ತೆಯ ಮಧ್ಯಭಾಗದಲ್ಲಿರುವ ಕಾವೇರಿ ನೀರಿನ ಪೈಪ್‌ಲೈನ್ ವಾಲ್ವ್‌ ಮೇಲ್ಚಾವಣಿ ಕಲ್ಲು ಒಡೆದಿದೆ. ಈ ಮಾರ್ಗದ ಸಮೀಪ ಕೈಗಾರಿಕಾ ಪ್ರದೇಶವಿದ್ದು, ಪ್ರತಿದಿನ ನೂರಾರು ಭಾರೀ ಮತ್ತು ಸಣ್ಣ ವಾಹನಗಳು ಸಂಚರಿಸುತ್ತವೆ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ.

ಈ ಅಪಾಯಕಾರಿ ಸ್ಥಳದಲ್ಲಿ ಸುಮಾರು ಒಂದು ತಿಂಗಳಿನಿಂದ ಕೆಂಪು ಬಣ್ಣದ ಪ್ಲಾಸ್ಟಿಕ್ ಡಬ್ಬ ಇರಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಹಾನಿಗೊಳಗಾದ ಮೇಲ್ಚಾವಣಿ ಬದಲಾಯಿಸಿ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹೋರಾಟದಿಂದ ಅಭಿವೃದ್ಧಿ ಪಡಿಸಿದ್ದ ರಸ್ತೆ:

ಹಾರೋಹಳ್ಳಿಯಿಂದ ಮೇಡಮಾರನಹಳ್ಳಿ ಕೆರೆವರೆಗಿನ ಈ ರಸ್ತೆ ಅಭಿವೃದ್ಧಿಗೂ ಮುನ್ನ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಿಡದಿಗೆ ತೆರಳುವ ವಾಹನ ಸವಾರರು ರಸ್ತೆ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದ ಪರಿಣಾಮ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಂಡಿದೆ.

ರಾತ್ರಿ ವೇಳೆ ರಸ್ತೆಯಲ್ಲಿ ವಿಶೇಷ ಸೌಂದರ್ಯ:

ಅಭಿವೃದ್ಧಿಗೊಂಡಿರುವ ಈ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿರುವ ಬೀದಿ ದೀಪಗಳ ಕಂಬಗಳು ರಾತ್ರಿ ವೇಳೆ ರಸ್ತೆಗೆ ವಿಶೇಷ ಸೌಂದರ್ಯ ನೀಡುತ್ತವೆ. ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಹಾಗೂ ದಿಕ್ಕು ಸೂಚಿಸುವ ಫಲಕ ಅಳವಡಿಸಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಹೂ ಗಿಡಗಳನ್ನೂ ನೆಡಲಾಗಿದೆ. ಆದರೆ, ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳ ನಡುವೆಯೂ ಕೆಲವೆಡೆ ಚರಂಡಿ ಹಾಗೂ ಮೋರಿಗಳ ಮೇಲ್ಚಾವಣಿ ಇನ್ನೂ ಅಳವಡಿಸಿಲ್ಲ. ಮೋರಿಗಳ ಮೇಲ್ಭಾಗದಲ್ಲಿ ಗಿಡಗಂಟಿ ಬೆಳೆದಿವೆ. ಕೆಲ ಬೀದಿ ದೀಪಗಳ ಕಂಬಗಳು ಸಡಿಲಗೊಂಡು ಬೀಳುವ ಸ್ಥಿತಿಯಲ್ಲಿದೆ.

ಅಭಿವೃದ್ಧಿಯಷ್ಟೇ ಅಲ್ಲ, ನಿರ್ವಹಣೆಯೂ ಮುಖ್ಯ:

ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆಯನ್ನು ದೀರ್ಘಕಾಲ ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ರಸ್ತೆಯ ಮಧ್ಯಭಾಗದಲ್ಲಿ ಹಾನಿಗೊಳಗಾದ ಕಾವೇರಿ ನೀರಿನ ಪೈಪ್‌ಲೈನ್ ಮೇಲ್ಚಾವಣಿ ದುರಸ್ತಿ, ಬಾಕಿ ಉಳಿದಿರುವ ಮೋರಿಗಳ ಮೇಲ್ಚಾವಣಿ ಅಳವಡಿಕೆ, ಬೀದಿ ದೀಪಗಳ ಕಂಬಗಳ ಸರಿಪಡಿಸುವಿಕೆ ಹಾಗೂ ರಸ್ತೆ ಬದಿ ಗಿಡಗಂಟಿಗಳ ತೆರವುಗೊಳಿಸುವುದು ಅಗತ್ಯ. ರಸ್ತೆಯ ಬದಿ ನೆಟ್ಟಿರುವ ಹೂ ಗಿಡಗಳ ನಿರ್ವಹಣೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ಕೋಟ್ .....................

ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುವುದಷ್ಟೇ ಮುಖ್ಯವಲ್ಲ, ರಸ್ತೆಯನ್ನು ಸುರಕ್ಷಿತವಾಗಿ, ಸುಂದರವಾಗಿ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ, ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳತ್ತ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

- ಹಾರೋಹಳ್ಳಿ ಕೋಟೆ ರಾಜು, ಸ್ಥಳೀಯ ನಿವಾಸಿ

15ಕೆಆರ್ ಎಂಎನ್ 4.ಜೆಪಿಜಿ

ಹಾರೋಹಳ್ಳಿಯಿಂದ ಬಿಡದಿಗೆ ಮೇಡಮಾರನಹಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೇಡಮಾರನಹಳ್ಳಿ ಕ್ರಾಸ್ ಬಳಿ ರಸ್ತೆ ಮಧ್ಯಭಾಗದಲ್ಲಿರುವ ಕಾವೇರಿ ನೀರಿನ ಪೈಪ್‌ಲೈನ್‌ ವಾಲ್ವ್‌ ಮೇಲ್ಚಾವಣಿ ಕಲ್ಲು ಒಡೆದಿರುವುದು.