ಕರ್ನಾಟಕ ರಾಜ್ಯ ಉದಯವಾಗುವ ಪೂರ್ವದಲ್ಲಿಯೇ ಸ್ಥಾಪಿತವಾದ ಕೆಸಿಸಿ ಬ್ಯಾಂಕ್ ಈ ಭಾಗದ ರೈತರ ಜೀವನಾಡಿ. ಕೃಷಿ ಜತೆಗೆ ಇತರ ಉದ್ಯೋಗವಲಯಗಳಿಗೆ ಆರ್ಥಿಕ ನೆರವು ಒದಗಿಸುತ್ತ ಗಮನಾರ್ಹ ಕೊಡುಗೆ ನೀಡುತ್ತಿದೆ.
ಧಾರವಾಡ:
ನೌಕರನ ಬದುಕಿಗೆ ಅನ್ನ-ಭದ್ರತೆ ಕೊಟ್ಟ ಸಂಸ್ಥೆಯ ಋಣ ಸಂದಾಯ ಪ್ರತಿಯೊಬ್ಬರ ಹೊಣೆಯಾಗಿರಬೇಕು ಎಂದು ಉಪ್ಪಿನ ಬೆಟಗೇರಿ ಮೂರುಸಾವಿರ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.ನಗರದ ಕೆಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರಿ ಸಂಘದ 64ನೇ ವಾರ್ಷಿಕ ಮಹಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಉದಯವಾಗುವ ಪೂರ್ವದಲ್ಲಿಯೇ ಸ್ಥಾಪಿತವಾದ ಕೆಸಿಸಿ ಬ್ಯಾಂಕ್ ಈ ಭಾಗದ ರೈತರ ಜೀವನಾಡಿ. ಕೃಷಿ ಜತೆಗೆ ಇತರ ಉದ್ಯೋಗವಲಯಗಳಿಗೆ ಆರ್ಥಿಕ ನೆರವು ಒದಗಿಸುತ್ತ ಗಮನಾರ್ಹ ಕೊಡುಗೆ ನೀಡುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಇಂತಹ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದೇ ಒಂದು ಭಾಗ್ಯ ಎಂಬ ಭಾವನೆ ನೌಕರರಲ್ಲಿ ಬರಬೇಕು ಎಂದರು.
ಸಂಘದ ಅಧ್ಯಕ್ಷ ಶಿವಾನಂದ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸದಸ್ಯರ ಸನ್ಮಾನ ಮತ್ತು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನೀತಾ ಸಿದ್ರಾಮ, ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ, ನಿರ್ದೇಶಕ ನಿಂಗಪ್ಪ ಸಪೂರಿ, ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿ.ಎಸ್. ಪಾಟೀಲ, ಎಂ.ವೈ. ಹೂಗಾರ, ಎಸ್.ಐ. ಕಮ್ಮಾರ, ಗದಿಗೆಪ್ಪ ಫಕ್ಕೀರಗೌಡರ, ಆನಂದ ಕುಂದಗೋಳ, ಸುರೇಶ ಅಂಬಿಗೇರ, ಎಂ.ಬಿ. ಜೀವಾಪೂರ ಇದ್ದರು. ಸಿ.ಡಿ. ಮಲ್ಲಾಪುರ ಸ್ವಾಗತಿಸಿದರು. ಮಹಾರಾಜಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.