ತಪ್ಪು ಮಾಡಿದವರಿಗೆ ಪಶ್ಚಾತ್ತಾಪ, ಭಯ ಸಹಜ

| Published : Sep 01 2024, 01:54 AM IST

ಸಾರಾಂಶ

ತಪ್ಪು ಆಗಿಲ್ಲ ಎಂದರೆ ಸದನದ ಆರಂಭಕ್ಕೂ ಮುನ್ನ ಕಮಿಷನ್ ರಚನೆ ಮಾಡುವ ಅಗತ್ಯ ಏನಿತ್ತು? ಪ್ರಕರಣವನ್ನು ಸಮರ್ಥವಾಗಿ ಎದುರಿಸಬೇಕಿತ್ತು

ಶಿರಹಟ್ಟಿ: ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದ್ದು, ಅವರಿಗೆ ತಪ್ಪು ಮಾಡಿದ್ದೇನೆ ಎಂಬ ಪಶ್ಚಾತ್ಚಾಪದ ಮನೋಭಾವ ಕಾಡುತ್ತಿದೆ. ಸ್ವಕ್ಷೇತ್ರದಲ್ಲಿ ಆಗಿರುವ ಮುಡಾ ಹಗರಣ ಭಯಕ್ಕೆ ಮೂಲ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ಪಟ್ಟಣದ ಜ. ಫಕೀರೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಕರಣದ ಪರಿಸ್ಥಿತಿ ತಿಳಿದು ಆತುರದಲ್ಲಿ ಕಮಿಷನ್ ನೇಮಕ ಮಾಡಿ ನುಣಚಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ೧೪ ಸೈಟ್ ಮಾತ್ರವಲ್ಲ ಬಗೆದಷ್ಟು ಅವ್ಯವಹಾರ ಬಯಲಾಗುತ್ತಿದೆ. ನೂರಕ್ಕೆ ನೂರರಷ್ಟು ತಪ್ಪು ಎಸಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ ಎಂದರು.

ತಪ್ಪು ಆಗಿಲ್ಲ ಎಂದರೆ ಸದನದ ಆರಂಭಕ್ಕೂ ಮುನ್ನ ಕಮಿಷನ್ ರಚನೆ ಮಾಡುವ ಅಗತ್ಯ ಏನಿತ್ತು? ಪ್ರಕರಣವನ್ನು ಸಮರ್ಥವಾಗಿ ಎದುರಿಸಬೇಕಿತ್ತು. ಹಿಂಬದಿಯಿಂದ ಹಾಗೂ ಕ್ಯಾಬಿನೆಟ್ ಮೂಲಕ ಎಲ್ಲವೂ ಸರಿ ಇದೆ ಎಂದು ಜನರಿಗೆ ಹೇಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ನಿವೃತ್ತ ನ್ಯಾಯಾಧೀಶರ ಏಕವ್ಯಕ್ತಿ ಆಯೋಗ ನೇಮಕ ಮಾಡಿ, ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಎಲ್ಲ ಜನರಿಗೆ ಅರ್ಥವಾಗುತ್ತಿದ್ದಂತೆ ದೆಹಲಿಗೆ ದೌಡಾಯಿಸಿ ಪಕ್ಷದ ವರಿಷ್ಠರಿಗೆ ಸಮಜಾಯಿಸಿ ನೀಡಲು ಪ್ರಯತ್ನಿಸಿದರು ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ನಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಮಾನ್ಯತೆ ಇಲ್ಲ. ವೋಟ್ ಬ್ಯಾಂಕ್‌ನಂತೆ ಅವರನ್ನು ಬಳಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದಾರೆ. ಇದರ ಇತಿಹಾಸ ಎಲ್ಲರಿಗೂ ತಿಳಿದಿದೆ. ಅಂಬೇಡ್ಕರ್‌ ಪಾರ್ಲಿಮೆಂಟ್‌ನಲ್ಲಿ ಇರಬೇಕಿತ್ತು. ಅವರ ಅನುಭವ ಅಗತ್ಯವಿತ್ತು. ಆದರೆ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲಿಲ್ಲ. ಇದು ಅವರ ದ್ವಿಮುಖ ನೀತಿ. ದಲಿತ ವಿರೋಧಿ ಎನ್ನಲು ಇದಕ್ಕಿಂತ ಇನ್ನೊಂದು ನಿದರ್ಶನ ಇಲ್ಲ. ಸ್ವತಃ ನೆಹರೂ ಅವರೇ ಅಂಬೇಡ್ಕರ್‌ ಅವರನ್ನು ಸೋಲಿಸಲು ಎರಡು ಬಾರಿ ಪ್ರಚಾರದ ಅಖಾಡಕ್ಕೆ ಧುಮುಕಿದರು. ಅಂಬೇಡ್ಕರ್‌ ಅವರನ್ನು ಸೋಲಿಸಿದ ವ್ಯಕ್ತಿಗೆ ಅಂದರೆ ಪಂಡಿತ್ ನೆಹರೂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಬಾಬು ಜಗಜೀವನರಾಮ್ ಅವರಿಗೂ ವಿರೋಧ ಮಾಡಿದರು. ಇದಕ್ಕೆ ಮುಖ್ಯ ಸಾಕ್ಷಿ ಮಂಡಲ್ ವರದಿ ವಿರೋಧಿಸಿದ್ದು. ಅಂದು ಒಬಿಸಿ ಮೀಸಲಾತಿ ನೀಡಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅಹಿಂದ ನೆಪದಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಜನರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಮುಖಂಡರು ಸರ್ಕಾರವನ್ನು ಬೀಳಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಗೃಹ ಸಚಿವ ಪರಮೇಶ್ವರ ಅವರನ್ನು ಸೋಲಿಸಿದವರು ಬಿಜೆಪಿಯವರಲ್ಲ. ಸ್ವಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂಬುದು ನೆನಪಿರಲಿ ಎಂದು ತಿವಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಗ್ಯಾರಂಟಿ ಇನ್ನಿತರ ಯೋಜನೆಗೆ ಬಳಕೆ ಮಾಡಿ ದಲಿತರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಎತ್ತಂಗಡಿ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಹಗರಣದಲ್ಲಿ ಸಹ ಹಣ ಕೊಳ್ಳೆ ಹೊಡೆದಿದ್ದು, ಕಾಂಗ್ರೆಸ್‌ನಲ್ಲಿನ ಪರಿಶಿಷ್ಟ ಪಂಗಡದ ಮುಖಂಡರು ಸಹ ಧ್ವನಿ ಎತ್ತುತ್ತಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದರು.

ಕಾಂಗ್ರೆಸ್‌ನವರು ಜಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನರಿಗೆ ಇದೆಲ್ಲ ಅರ್ಥವಾಗಿದೆ. ನನ್ನನ್ನು ತೆಗೆದು ಬಿಟ್ಟರೆ ಮೂಲೆ ಗುಂಪಾಗಿ ಬಿಡುತ್ತೇನೆ ಎಂಬ ಭಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಇಷ್ಟೆಲ್ಲ ನಾಟಕೀಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಮುಖ್ಯವಾಗಿ ಕಾಂಗ್ರೆಸ್ ಮುಖಂಡರು ರಾಜಭವನದ ಬದಲು ಮುಡಾಕ್ಕೆ ಪಾದಯಾತ್ರೆ ಹೋಗಬೇಕಿತ್ತು. ತಪ್ಪು ಮಾಡಿದ್ದೇವೆ ಎಂಬ ಭಯ ಅವರಿಗೆ ಮನದಟ್ಟಾದರೂ ರಾಜ್ಯದಲ್ಲಿ ರಾಜಕೀಯ ನಾಟಕವಾಡುತ್ತ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇನ್ನು ಮುಂದೆ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ. ಇದರಲ್ಲಿ ರಾಜಕೀಯ ವಾಸನೆ ಏನಿಲ್ಲ. ಸಂವಿಧಾನ ಬದ್ದ ನಿರ್ಧಾರ ತೆಗೆದುಕೊಂಡಿದ್ದಾರೆ. ೨೦೦೫-0೬ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಯುಕ್ತವಾಗಿ ರಾಜ್ಯಭಾರ ಮಾಡುತ್ತಿದ್ದು, ಅಂದಿನ ಸಮಯದಲ್ಲಿ ಕುಮಾರಸ್ವಾಮಿ ಪ್ರಕರಣ ನಡೆದಿದೆ. ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಿಮ್ಮ ಹಣೆಬರಹ ಎಲ್ಲರಿಗೂ ತಿಳಿದಿದೆ. ಜನ ಸುಮ್ಮನೆ ಇದ್ದಾರೆ ಎಂದರೆ ಅದರ ಅರ್ಥ ಇತಿಹಾಸ ಮರೆತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದರು.

ಶ್ರೀಗಳ ಆಶೀರ್ವಾದಕ್ಕೆ ಮತ್ತೆ ಬರುತ್ತೇನೆ:

ಕಳೆದ ಬಾರಿ ಜರುಗಿದ ಲೋಕಸಭಾ ಚುನಾವಣಾ ಸಮಯದಲ್ಲಿ ಲಿಂಗಾಯತ ಮತ್ತು ಬ್ರಾಹ್ಮಣ ಎಂಬ ರೀತಿಯಲ್ಲಿ ಚುನಾವಣೆಯಲ್ಲಿ ಬಿಂಬಿತವಾಗಿತ್ತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಅಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಅವರು ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಉಭಯ ಶ್ರೀಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಬಂದಿದ್ದೇನೆ. ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಪಡೆಯಲು ಇನ್ನೊಮ್ಮೆ ಬರುತ್ತೇನೆ. ಕ್ಷಮಿಸಿ, ಆಶೀರ್ವದಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಮುಖ್ಯವಾಗಿ ಸಂಪರ್ಕದ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.

ಜ. ಫಕೀರ ಸಿದ್ದರಾಮ ಶ್ರೀಗಳು, ಶಾಸಕ ಚಂದ್ರು ಲಮಾಣಿ, ಎಂ.ಆರ್. ಪಾಟೀಲ, ಎಸ್.ವಿ. ಸಂಕನೂರ, ಚಂದ್ರಕಾಂತ ನೂರಶೆಟ್ಟರ್‌, ರವಿ ದಂಡಿನ, ನಾಗರಾಜ ಲಕ್ಕುಂಡಿ, ರಾಜು ಕುರಡಗಿ, ನಾಗರಾಜ ಛಬ್ಬಿ, ಅಶೋಕ ವರವಿ ಇತರರು ಇದ್ದರು.