ಈಗ ಪ್ರಾರಂಭಿಕವಾಗಿ ಜಲಾಶಯದ 33 ಗೇಟಗಳನ್ನು 10 ಅಡಿಗಳ ವರೆಗೆ ತೆರವು ಮಾಡಲಾಗುವುದು. ಆನಂತರ ಜಲಾಶಯದಲ್ಲಿ ನೀರಿನ ಮಟ್ಟ 1613 ಅಡಿಗಳಿಗೆ ಬಂದರೆ ಬಾಕಿ ಉಳಿದ ಭಾಗ ತೆರವುಗೊಳಿಸಲಾಗುವುದು

ಮುನಿರಾಬಾದ್: 2026ರ ಮೇ ಅಂತ್ಯಕ್ಕೆ ತುಂಗಭದ್ರಾ ಜಲಾಶಯದ ಶಿಥಿಲಗೊಂಡ 33 ಗೇಟ್‌ಗಳನ್ನು ಬದಲಾಯಿಸಿ ನೂತನ ಗೇಟ್‌ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯಲ್ಲಿ ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿ ಹಾಗೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಸಭೆಯ ಆನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿ. 5ರಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ತುಂಗಭದ್ರಾ ಜಲಾಶಯದ ಗೇಟುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಡಿ. 8ರಂದು ಜಲಾಶಯದ ಶಿಥಿಲಗೊಂಡ ಹಳೆಯ 33 ಗೇಟುಗಳ ತೆರವು ಕಾರ್ಯ ಪ್ರಾರಂಭವಾಗಲಿದೆ. ತುಂಗಭದ್ರಾ ಜಲಾಶಯದ ಪ್ರತಿ ಗೇಟ್‌ಗಳು 20 ಅಡಿ ಎತ್ತರ ಹಾಗೂ 40 ಅಡಿ ಅಗಲವಿದೆ ಎಂದರು.

ಈಗ ಪ್ರಾರಂಭಿಕವಾಗಿ ಜಲಾಶಯದ 33 ಗೇಟಗಳನ್ನು 10 ಅಡಿಗಳ ವರೆಗೆ ತೆರವು ಮಾಡಲಾಗುವುದು. ಆನಂತರ ಜಲಾಶಯದಲ್ಲಿ ನೀರಿನ ಮಟ್ಟ 1613 ಅಡಿಗಳಿಗೆ ಬಂದರೆ ಬಾಕಿ ಉಳಿದ ಭಾಗ ತೆರವುಗೊಳಿಸಲಾಗುವುದು ಎಂದು ಹೇಳಿದರು.

ತುಂಗಭದ್ರಾ ಜಲಾಶಯದ ನೂತನ ಗೇಟುಗಳನ್ನು ಅಳವಡಿಸುವ ಗುತ್ತಿಗೆಯನ್ನು ಗುಜರಾತ್ ಮೂಲದ ಹಾರ್ಡ್‌ವೇರ್‌ ಟೂಲ್ಸ್ ಹಾಗೂ ಮಶಿನರಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆ ಜಲಾಶಯದ ಗೇಟುಗಳ ಜೋಡಣೆ ವಿಚಾರದಲ್ಲಿ ಅತ್ಯಂತ ಅನುಭವಿ ಸಂಸ್ಥೆಯಾಗಿದೆ. ಈಗಾಗಲೇ ಈ ಸಂಸ್ಥೆಯು ದೇಶದ ವಿವಿಧ ಜಲಾಶಯಗಳಲ್ಲಿ ಗೇಟು ಬದಲಿಸಿದ ಅನುಭವ ಹೊಂದಿದೆ. ಈ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿರುವ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾದ ಫಾರಕ್ಕ ಬ್ಯಾರೇಜಿನ 124 ಗೇಟ್‌ಗಳನ್ನು ಬದಲಾಯಿಸಿ ನೂತನ ಗೇಟ್‌ ಅಳವಡಿಸಿದೆ. ವಿಶೇಷವೆಂದರೆ ತುಂಗಭದ್ರಾ ಜಲಾಶಯದ ಗೇಟ್‌ಗಳು ಹಾಗೂ ಫಾರಕ್ಕ ಬ್ಯಾರೇಜಿನ ಗೇಟುಗಳು ಉದ್ದ ಹಾಗೂ ಅಗಲ ಹಾಗೂ ಡಿಸೈನ್ ಎಲ್ಲ ಸರಿಸಮವಾಗಿದೆ ಎಂದು ಹೇಳಿದರು.

ಗುತ್ತಿಗೆದಾರರು ಜಲಾಶಯದ ಹಳೆಯ ಗೇಟ್‌ ತೆರವುಗೊಳಿಸಲು ಎರಡು ತಂಡ ರಚಿಸಲಿದ್ದಾರೆ ಹಾಗೂ ಜಲಾಶಯದ 33 ನೂತನ ಗೇಟ್‌ ಅಳವಡಿಸುವ ನಿಟ್ಟಿನಲ್ಲಿ ಮೂರು ತಂಡ ರಚಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಗುತ್ತಿಗೆದಾರರು ಮೇ 30ರೊಳಗೆ ಜಲಾಶಯದ ಎಲ್ಲ 33 ಗೇಟುಗಳನ್ನು ಬದಲಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಿರ್ದೇಶನ ಮೇರೆಗೆ ತಾವು ಪ್ರತಿ 15 ದಿನಕ್ಕೊಮ್ಮೆ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ಗೇಟುಗಳ ಅಳವಡಿಕೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

ಗೇಟ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಂಧ್ರ ಸರ್ಕಾರವು ತನ್ನ ಪಾಲಿನ ₹20 ಕೋಟಿ ಹಣ ಬಿಡುಗಡೆ ಮಾಡಿದ್ದು, ಕರ್ನಾಟಕ ಸರ್ಕಾರವು ತನ್ನ ಪಾಲಿನ ₹10 ಕೋಟಿ ಹಣ ಮಂಗಳವಾರದ ಒಳಗೆ ಬಿಡುಗಡೆ ಮಾಡಲಿದೆ. ಜಲಾಶಯದ ಗೇಟುಗಳ ನಿರ್ಮಾಣದ ವಿಷಯದಲ್ಲಿ ಹಣದ ಕೊರತೆ ಇಲ್ಲ ಎಂದರು.

ನೀರಾವರಿ ಸಲಹಾ ಸಮಿತಿ ಸಭೆ ಮುನಿರಾಬಾದಿನಲ್ಲಿ ನಡೆಯದೆ ಬೆಂಗಳೂರಿನಲ್ಲಿ ಏಕೆ ನಡೆಯುತ್ತಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ಅಚ್ಚಕಟ್ಟು ಪ್ರದೇಶದ ಕೆಲವು ಸಮಸ್ಯೆ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅವರ ಸಮ್ಮುಖದಲ್ಲಿ ಚರ್ಚಿಸಲು ಇಚ್ಛಿಸಿದರು. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಸಭೆ ಆಯೋಜಿಸಲಾಯಿತು. ಇನ್ನು ಮುಂಬರುವ ದಿನಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಮುನಿರಾಬಾದಿನಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ, ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಮಲಗಿವಾಡ, ಕಾರ್ಯಪಾಲಕ ಅಭಿಯಂತರ ಗೋಡೆಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಬಸಪ್ಪ ಜಾನಕಾರ್, ಧರ್ಮರಾಜ್ ಉಪಸ್ಥಿತರಿದ್ದರು.