ಸಾರಾಂಶ
ನಾವು ಭೂಮಿಯಿಂದ ನೀರನ್ನು ಸೆಳೆದುಕೊಳ್ಳುತ್ತಿದ್ದೇವೆಯೇ ಹೊರತು ನೀರನ್ನು ಮರುಪೂರಣ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ವಿಜಯ ಶಾಲೆ ಅಧ್ಯಕ್ಷರಾದ ಪರಿಸರವಾದಿ ವೈ.ಎನ್.ಸುಬ್ಬಸ್ವಾಮಿ ತಿಳಿಸಿದರು. ಹಾಸನದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ವಿಶ್ವ ಪರಿಸರ ದಿನ ಆಚರಣೆ
ಕನ್ನಡಪ್ರಭ ವಾರ್ತೆ ಹಾಸನನಾವು ಭೂಮಿಯಿಂದ ನೀರನ್ನು ಸೆಳೆದುಕೊಳ್ಳುತ್ತಿದ್ದೇವೆಯೇ ಹೊರತು ನೀರನ್ನು ಮರುಪೂರಣ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ವಿಜಯ ಶಾಲೆ ಅಧ್ಯಕ್ಷರಾದ ಪರಿಸರವಾದಿ ವೈ.ಎನ್.ಸುಬ್ಬಸ್ವಾಮಿ ತಿಳಿಸಿದರು.
ನಗರದ ವಿಜಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪರಿಸರ ದಿನಾಚರಣೆ’ಯ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ‘ಭೂಮಿಯ ಮೇಲ್ಮೈ ಉಷ್ಣತೆಯು ಈಗಿರುವ ತಾಪಮಾನಕ್ಕಿಂತ ಶೇಕಡ 1ರಷ್ಟು ಹೆಚ್ಚಾದರೂ ಸಾವಿರಾರು ಜೀವಜಂತುಗಳು ನಾಶವಾಗುವ ಸಾಧ್ಯತೆಗಳಿವೆ. ಆದ್ದರಿಂದ ನಾವು ನಮ್ಮ ಸುತ್ತಮುತ್ತ ಹಸುರೀಕರಣ ಮಾಡಬೇಕಿದೆ. ಅಷ್ಟೇ ಅಲ್ಲದೆ ಓಡುತ್ತಿರುವ ನೀರನ್ನು ನಡೆಯುವಂತೆ, ನಡೆಯುತ್ತಿರುವ ನೀರನ್ನು ನಿಲ್ಲುವಂತೆ, ನಿಂತಿರುವ ನೀರನ್ನು ಇಂಗುವಂತೆ ಮಾಡಬೇಕಾದ ಪ್ರಾಮುಖ್ಯತೆ ಇದೆ. ಇದರಿಂದ ಭೂಮಿಯ ತಾಪಮಾನವನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ. ಇದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಕರ್ತವ್ಯವಾಗಬೇಕು’ ಎಂದು ಸಲಹೆ ನೀಡಿದರು.10 ನೇ ತರಗತಿಯ ವಿದ್ಯಾರ್ಥಿಗಳು ಜಲ ಸಾಕ್ಷರತೆಯನ್ನು ಕುರಿತು ಅಭಿನಯಿಸಿದ ಪ್ರಹಸನವು ಅತ್ಯುತ್ತಮವಾಗಿತ್ತು.
ಬಿ.ಆರ್.ಲಕ್ಷ್ಮಣರಾವ್ ವಿರಚಿತ ಗೀತೆ ಹಾಗೂ ರೆಡ್ಯೂಸ್-ರೀ ಯೂಸ್-ರೀ ಸೈಕಲ್ (3 ಆರ್) ತತ್ವವನ್ನು ಅಳವಡಿಸಿಕೊಂಡು ಪ್ಲಾಸ್ಟಿಕ್‌ನ್ನು ತ್ಯಜಿಸುವ ಶಪಥ ಮಾಡುವ ‘ಬನ್ನಿ ನೃತ್ಯ’ ಎಲ್ಲರ ಮನಸೆಳೆಯಿತು.ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಡಾ.ಶ್ರೀಲಕ್ಷ್ಮಿ ಎಸ್., ಪ್ರಾಂಶುಪಾಲ ನಂದೀಶ ಕೆ.ಎಸ್. ಇದ್ದರು.10 ನೇ ತರಗತಿ ವಿದ್ಯಾರ್ಥಿ ಆದಿತ್ಯ ಎಲ್. ಕಾರ್ಯಕ್ರಮವನ್ನು ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿ ವಂದಿಸಿದನು .
ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಎಂ.ಜಿ.ಪಾರ್ಕ್ ಹಾಗೂ ದೊಡ್ಡ ಕೊಂಡಗೊಳದಲ್ಲಿ ಶ್ರಮದಾನ ನೆರವೇರಿಸಿದರು.