ಸಾರಾಂಶ
ಕನ್ನಡಪ್ರಭವಾರ್ತೆ ಹನೂರು
ತಾಲೂಕಿನ ಮಲೆ ಮಾದೇಶ್ವರ ಬೆಟ್ಟಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ನೇಮಕವಾಗಿದ್ದ ಸಿಬ್ಬಂದಿ ಮತಯಂತ್ರ, ವಿವಿಪ್ಯಾಟ್ ನೊಂದಿಗೆ ಭಾನುವಾರ ಮಧ್ಯಾಹ್ನ ತೆರಳಿದರು. ಏಪ್ರಿಲ್ 26ರಂದು ಇಂಡಿಗನತ್ತ ಗ್ರಾಮದಲ್ಲಿನ ಗ್ರಾಮಸ್ಥರು ಮತಯಂತ್ರ ಧ್ವಂಸ ಮಾಡಿದ್ದ ಹಿನ್ನೆಲೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆ ಅಧಿಕಾರಿಸಿ.ಟಿ ಶಿಲ್ಪ ನಾಗ್ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದರು. ಚುನಾವಣಾ ಆಯೋಗದವರು ಏಪ್ರಿಲ್ 29 ರಂದು ಮರುಮತದಾನ ನಡೆಸಲು ತೀರ್ಮಾನಿಸಿ ಪ್ರಕಟಣೆ ಹೊರಡಿಸಿದ್ದರು. ಈ ಹಿನ್ನೆಲೆ ಹನೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಹಾಗೂ ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಮರು ಮತದಾನದ ಪ್ರಕ್ರಿಯೆ ನಡೆಯಿತು.ಹನೂರು ತಾಲೂಕಿನ ಇಂಡಿಗನತ್ತ ಮತಗಟ್ಟೆ ಸಂಖ್ಯೆ 146 ರ ಪಿಆರ್‌ಒ ವೆಂಕಟೇಶ್ ಕೆ, ಎಪಿಆರ್‌ಒ ಮಹದೇವಸ್ವಾಮಿ, ಆರ್‌ಪಿಒಗಳಾಗಿ ಆರ್. ಚಂದ್ರ, ಕೆ.ಎಸ್. ಮಹದೇವಸ್ವಾಮಿ, ಕೆ. ಮಹೇಶ್‌ರನ್ನು ನಿಯೋಜನೆ ಮಾಡಲಾಗಿದೆ. ಭಾನುವಾರ ಮಧ್ಯಾನ ಇಂಡಿಗನತ್ತ ಗ್ರಾಮಕ್ಕೆ ತೆರಳಿದ ಚುನಾವಣಾ ಸಿಬ್ಬಂದಿಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಕರೆದೊಯ್ಯಲಾಯಿತು.
ಗ್ರಾಮಸ್ಥರಿಗೆ ಟಾಂ ಟಾಂ ಮೂಲಕ ಪ್ರಚಾರ:ಇಂಡಿಗನತ್ತ ಗ್ರಾಮದ ಮರು ಮತದಾನಕ್ಕೆ ದಿನಾಂಕ ನಿಗದಿ ಮಾಡಿದ್ದ ಹಿನ್ನೆಲೆ ಚುನಾವಣೆಗೆ ಒಂದು ದಿನ ಮಾತ್ರ ಸಮಯವಕಾಶ ಇದ್ದರಿಂದ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ ನೊಂದಿಗೆ ಗ್ರಾಮದ ಪ್ರತಿಯೊಂದು ಬಡಾವಣೆಗಳಲ್ಲಿ ಸೋಮವಾರ ಚುನಾವಣೆ ಇರುವ ಬಗ್ಗೆ ಟಾಂ ಟಾಂ ಮೂಲಕ ಮಾಹಿತಿ ತಿಳಿಸಲಾಯಿತು. ರಸ್ತೆ ದುರಸ್ತಿಗೆ ಕ್ರಮ: ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನಾಥ ಗ್ರಾಮದವರೆಗಿನ ರಸ್ತೆ ದುರಸ್ತಿಗೊಂಡಿರುವುದರಿಂದ ಶನಿವಾರದಿಂದ ಜೆಸಿಬಿ ಯಂತ್ರದ ಮೂಲಕ ರಸ್ತೆ ದುರಸ್ತಿ ಮಾಡಲಾಗುತ್ತಿದೆ ಎಂದು ಪಿಡಿಒ ಕಿರಣ್ ತಿಳಿಸಿದರು.
ಏ.26ರಂದು ಇಂಡಿಗನತ್ತ ಗ್ರಾಮಸ್ಥರು ಮತಯಂತ್ರ ದ್ವಂಸ ಮಾಡಿದ್ದ ಹಿನ್ನೆಲೆ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಶಿಲ್ಪಾನಾಗ್ ಆದೇಶದಂತೆ ಏ. 29ರಂದು ಇಂಡಿಗನತ್ತ ಗ್ರಾಮದಲ್ಲಿ ಮರುಮತದಾನ ನಡೆಯಲಿದೆ ಯಾವುದೇ ಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.-ಮಲ್ಲಿಕಾರ್ಜುನ್, ಸಹಾಯಕ ಚುನಾವಣಾಧಿಕಾರಿ