ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಮನೆ ಬಾಗಿಲಿನಲ್ಲಿಯೇ ಪರಿಹರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ಜಾರಿಗೆ ತಂದಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ನಗರದಲ್ಲಿರುವ ಸಿದ್ದಾರ್ಥ ನಗರದ ಬೀಟ್ ೧೫ರ ವಾರ್ಡ್‌ನ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಮೊದಲು ಪೊಲೀಸ್ ಠಾಣೆಗೆ ದೂರು ಬಂದ ನಂತರ ಕ್ರಮವಹಿಸಲಾಗುತ್ತಿತ್ತು. ಇದೀಗ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಲಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲಿದ್ದಾರೆ. ಇದರಿಂದ ಅತೀ ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲಕರವಾಗಿದೆ ಎಂದರು.ನಗರವು ಬೆಳೆದಂತೆ ಸಾರ್ವಜನಿಕರ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅಹವಾಲುಗಳನ್ನು ಸ್ವೀಕರಿಸಲು ಪ್ರತಿ ಪೊಲೀಸ್ ಠಾಣಾ ಸರಹದ್ದನ್ನು ಬೀಟ್‌ಗಳಾಗಿ ವಿಂಗಡಿಸಲಾಗಿದೆ. ಸಬ್ ಬೀಟ್‌ಗಳಲ್ಲಿ ೪೦ ರಿಂದ ೫೦ ಮನೆಗಳ ಗುಂಪನ್ನು ರಚಿಸಲಾಗಿದೆ. ಪ್ರತಿ ಕ್ಲಸ್ಟರ್‌ಗೆ ಓರ್ವ ಪೊಲೀಸ್ ಸಿಬ್ಬಂದಿ ನೇಮಿಸಿದ್ದು ಉಸ್ತುವಾರಿ ಅಧಿಕಾರಿಗಳಾಗಿ ಎ.ಎಸ್.ಐ, ಪಿಎಸ್.ಐ ಇರಲಿದ್ದಾರೆ ಎಂದು ತಿಳಿಸಿದರು. ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತ ನಡೆಯುವ ದುಷ್ಕೃತ್ಯ ಹಾಗೂ ಸಮಸ್ಯೆಗಳ ಬಗ್ಗೆ ದೂರು, ಮಾಹಿತಿ ನೀಡಬೇಕು. ಇಲಾಖೆಯು ಮಾಹಿತಿದಾರರ ಮಾಹಿತಿಗಳ ಬಗ್ಗೆ ಗೌಪ್ಯತೆ ಕಾಪಾಡಲಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಸಾರ್ವಜನಿಕರ ರಕ್ಷಣೆ ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದೆ ಎಂದರು. ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವಿನ ಒಡನಾಟ ಉತ್ತಮ ರೀತಿಯಲ್ಲಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳು ಸಹ ಇರುತ್ತವೆ. ಅಪರಾಧಗಳು ಆದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಅಪರಾಧಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಹೇಳಿದರು. ಸಿದ್ದಾರ್ಥ ನಗರದ ಬೀಟ್-೧೫ರ ವಾರ್ಡ್‌ಗೆ ಸಂಬಂಧಿಸಿದ ದೂರು, ಸಮಸ್ಯೆಗಳಿಗೆ ಎ.ಎಸ್.ಐ. ಎಚ್.ಬಿ. ನಾಗೇಶ್ ಮೊ.ಸಂ. ೯೪೮೩೮೯೭೯೬೨, ಮುಖ್ಯ ಪೇದೆ ಸುರೇಶ್ ಮೊ.ಸಂ. ೯೭೪೩೭೯೧೯೨೯, ಮಹಿಳಾ ಪೇದೆ ಉಮಾ ಮಹೇಶ್ವರಿ ಮೊ.ಸಂ. ೭೦೨೨೪೫೨೪೭೫ ಮತ್ತು ಮಣಿಕಂಠ ಮೊ.ಸಂ. ೯೭೩೧೧೩೭೧೦೭ ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ಶಶಿಧರ್ ಮಾತನಾಡಿ, ಸಮಾಜದಲ್ಲಿ ಅಪರಾಧಗಳನ್ನು ತಡೆಯಲು, ಅಪರಾಧಗಳನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರ ಸಹಕಾರ ಇಲ್ಲದೇ ಪೊಲೀಸ್ ಇಲಾಖೆಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಕಷ್ಟಕರವಾಗಿದೆ. ಸಾರ್ವಜನಿಕರಿಗೆ ಯಾವುದೇ ತರಹದ ಸಮಸ್ಯೆಗಳಾಗದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಜವಬ್ದಾರಿಯಾಗಿದೆ ಸಾರ್ವಜನಿಕರು ಇಲಾಖೆಗೆ ಸಹಕರಿಸಬೇಕು ಎಂದರು. ಸಾರ್ವಜನಿಕರು ಸುರಕ್ಷಿತರಾಗಿರಬೇಕು. ಅಪರಾಧಗಳು ನಡೆಯುವ ಮುಂಚೆಯೇ ತಡೆಯುವ ಉದ್ದೇಶದಿಂದಾಗಿ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ ೧೧೨, ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮, ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ ೧೦೯೦, ಸೈಬರ್ ಅಪರಾಧ ಮಾಹಿತಿ ದೂರಿನ ಸಂಖ್ಯೆ ೧೦೩೦, ಮಹಿಳಾ ಸಹಾಯವಾಣಿ ಸಂಖ್ಯೆ ೧೦೯೧ ಸಂಪರ್ಕಿಸಿ ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದರು. ನಗರಸಭಾ ಸದಸ್ಯರಾದ ಕುಮುದಾ ಕೇಶವಮೂರ್ತಿ ಅವರು ಮಾತನಾಡಿ ವಾರ್ಡ್‌ನಲ್ಲಿ ವಾಸಿಸುವ ಜನರ ಅನೇಕ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯಿಂದ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತಿದ್ದು ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. ನಗರಕ್ಕೆ ಉದ್ಯೋಗಗಳನ್ನು ಅರಸಿ ನೆರೆಹೊರೆ ಜಿಲ್ಲೆ, ರಾಜ್ಯಗಳಿಂದ ಹಲವರು ವಲಸೆ ಬರುತ್ತಿದ್ದು ಇವರ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರಬೇಕು. ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಹೆಚ್ಚಿನ ಬೀಟ್‌ಗಳನ್ನು ನಡೆಸಬೇಕು ಎಂದರು. ಡಿವೈಎಸ್‌ಪಿ ಲಕ್ಷ್ಮಯ್ಯ, ಧರ್ಮೇಂದ್ರ, ಕ್ಲಸ್ಟರ್ ಬೀಟ್‌ನ ಗುರುಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.