ಕಟ್ಟೆಮಾಡು ದೇವಾಲಯ ಸಮಿತಿಯಿಂದ ಜಿಲ್ಲಾಡಳಿತಕ್ಕೆ ವರದಿ

| Published : Feb 12 2025, 12:32 AM IST

ಸಾರಾಂಶ

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಈ ಹಿಂದೆ ಉಂಟಾದ ವಸ್ತ್ರ ಸಂಹಿತೆ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸೂಚನೆ ಮೇರೆಗೆ ದೇವಾಲಯ ಆಡಳಿತ ಮಂಡಳಿ ಮತ್ತು ಸದಸ್ಯರು ಸಭೆ ನಡೆಸಿ ಮಂಗಳವಾರ ಜಿಲ್ಲಾಡಳಿತಕ್ಕೆ ಸಭೆಯ ವರದಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಈ ಹಿಂದೆ ಉಂಟಾದ ವಸ್ತ್ರ ಸಂಹಿತೆ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಸೂಚನೆ ಮೇರೆಗೆ ದೇವಾಲಯ ಆಡಳಿತ ಮಂಡಳಿ ಮತ್ತು ಸದಸ್ಯರು ಸಭೆ ನಡೆಸಿ ಮಂಗಳವಾರ ಜಿಲ್ಲಾಡಳಿತಕ್ಕೆ ಸಭೆಯ ವರದಿ ಸಲ್ಲಿಸಿದರು.

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ದನ ಅವರ ಜೊತೆಯಲ್ಲಿ ಆಡಳಿತ ಮಂಡಳಿ ಮತ್ತು ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ದೇವಾಲಯದ ಬೈಲಾ, ಜಿಲ್ಲಾಡಳಿತದ ಸೂಚನೆ ಮೇರೆಗೆ ನಡೆಸಲಾದ ಸಭೆ, ಸಭೆಯ ಹಾಜರಾತಿ, ಸಭೆಯಲ್ಲಿ ಕೇಳಿ ಬಂದ ಪರ ವಿರೋಧಗಳ ಲಿಖಿತ ಪತ್ರಗಳು, ಗ್ರಾಮಸ್ಥರು ಮತ್ತು ಅಲ್ಲಿರುವ ವಿವಿಧ ಸಮುದಾಯಗಳು ನೀಡಿರುವ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಟ್ಟೆಮನೆ ಶಶಿ ಜನಾರ್ದನ, ದೇವಾಲಯ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಫೆ.೧೦ರ ವರೆಗೆ ಕಾಲಾವಕಾಶ ನೀಡಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆಯೇ ಸಭೆ ಸೇರಿ ಎಲ್ಲ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದು ಹೇಳಿದರು.

ದೇವಾಲಯದ ಬೈಲಾದಲ್ಲಿ ಯಾವುದೇ ಜನಾಂಗದ ಸಂಪ್ರದಾಯಕ್ಕೆ ಅವಕಾಶ ಇಲ್ಲ ಎನ್ನುವುದನ್ನು ಉಲ್ಲೇಖಿಸಲಾಗಿದೆ. ಇನ್ನುಳಿದ ೧೬ ಕಾಲಂಗಳಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸಲಾಗಿದೆ. ಇನ್ನು ಸಭೆಯಲ್ಲಿ ಗ್ರಾಮಸ್ಥರು ನೀಡಿರುವ ಪರ ವಿರೋಧ ಲಿಖಿತ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಗ್ರಾಮಸ್ಥರ ತೀರ್ಮಾನದಂತೆ ಬೈಲಾ ಯಥಾ ಸ್ಥಿತಿಯಲ್ಲಿ ಮುಂದುವರಿಯಬೇಕು. ಅದಕ್ಕೆ ಯಾವುದೇ ಸೇರ್ಪಡೆ ಮಾಡಬಾರದೆಂದು ಜಿಲ್ಲಾಡಳಿತಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತದ ನಿರ್ಧಾರಗಳಿಗೆ ಬದ್ಧರಾಗುವುದಾಗಿ ಹೇಳಿದ ಶಶಿ ಜನಾರ್ದನ, ಜಿಲ್ಲಾಡಳಿತದ ಆದೇಶಕ್ಕೆ ನಿರೀಕ್ಷೆ ಮಾಡುವುದಾಗಿ ಹೇಳಿದರು.

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯ ಆಡಳಿತ ಮಂಡಳಿ ಮತ್ತು ಸಮಿತಿ ಸದಸ್ಯರ ವರದಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ದೇವಾಲಯ ಆಡಳಿತ ಮಂಡಳಿಯ ೧೩ ಮತ್ತು ಸಮಿತಿಯ ೪೬ ಸದಸ್ಯರು ಸಭೆ ನಡೆಸಿ ಲಿಖಿತ ತೀರ್ಮಾನದ ವರದಿ ಸಲ್ಲಿಸಿದ್ದಾರೆ. ಗ್ರಾಮಸ್ಥರು ಮತ್ತು ಸಮುದಾಯದ ಪರವಾಗಿಯೂ ಮನವಿಗಳನ್ನು ಸಲ್ಲಿಸಲಾಗಿದೆ.

ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಈಗಾಗಲೇ ಮಾರ್ಚ್ ೧೩ರ ವರೆಗೆ ಕಟ್ಟೆಮಾಡು ದೇವಾಲಯ ವ್ಯಾಪ್ತಿಯಲ್ಲಿ ಸೆಕ್ಷನ್ ೧೬೩ ಅಡಿ ನಿಷೇಧಾಜ್ಞೆ ಹಾಕಲಾಗಿದೆ. ಪೊಲೀಸ್ ಇಲಾಖೆ ವರದಿ ಆಧರಿಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.