ನೀರು, ಮೇವಿನ ಸಮಸ್ಯೆಯಾಗದಂತೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಿ: ಶಾಸಕ ಜಿ.ಎಸ್. ಪಾಟೀಲ್‌

| Published : Jan 18 2024, 02:00 AM IST

ನೀರು, ಮೇವಿನ ಸಮಸ್ಯೆಯಾಗದಂತೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಿ: ಶಾಸಕ ಜಿ.ಎಸ್. ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಬರ ಹಿನ್ನೆಲೆಯಲ್ಲಿ ಗಜೇಂದ್ರಗಡದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಜಿ.ಎಸ್. ಪಾಟೀಲ್‌ ಅವರು ಕುಡಿಯುವ ನೀರು ಮತ್ತು ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಜೇಂದ್ರಗಡ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಸುಗಳಿಗೆ ಮೇವಿನ ಕೊರತೆಯಾಗದಂತೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ತ್ವರಿತಗತಿಯಲ್ಲಿ ವರದಿ ನೀಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಸೂಚಿಸಿದ್ದಾರೆ.

ಸ್ಥಳೀಯ ಗದಗ ರಸ್ತೆಯ ತಾಪಂ ಕಾರ್ಯಾಲಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಶೀಘ್ರವೇ ಬೇಸಿಗೆ ಆರಂಭವಾಗಲಿದೆ. ತಾಲೂಕಿನಲ್ಲಿ ೪೬ ಗ್ರಾಮಗಳಿದ್ದು, ಹೊಳೆಯಲ್ಲಿ ನೀರು ಕಡಿಮೆ ಇರುವುದರಿಂದ ಬೇಸಿಗೆಯಲ್ಲಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು. ಭವಿಷ್ಯದ ಚಿಂತೆ ಮಾಡಬೇಡಿ, ಹೊಳೆ ನೀರು ಬರಲಿ ಬಿಡಲಿ ಅದರ ಬಗ್ಗೆ ಚಿಂತಿಸುವ ಬದಲು ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಮುಂದೆ ಕೆರೆಗೆ ನೀರು ಬರುತ್ತದೆ. ಅದಕ್ಕೆ ಬೇಕಾದ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ. ನರೇಗಲ್ ಹಾಗೂ ಗಜೇಂದ್ರಗಡ ಗ್ರಾಪಂ ವ್ಯಾಪ್ತಿಯಲ್ಲಿ ಬರಗಾಲದ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸರ್ಕಾರ ಸೂಚಿಸಿದ್ದು, ಅಗತ್ಯ ಅನುದಾನ ಸಹ ಬಿಡುಗಡೆಯಾಗಲಿದೆ. ತಾಲೂಕು ಕೃಷಿ ಪ್ರಧಾನವಾಗಿದ್ದು, ಹಸುಗಳ ಸಂಖ್ಯೆ ಹೆಚ್ಚಿದೆ. ಮೇವಿನ ಕೊರತೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. ಗೋಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿರಬೇಕು. ರಾಜ್ಯದಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ್ದನ್ನು ಸಹ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಸರ್ಕಾರಿ ಹಾಗೂ ಖಾಸಗಿ ಕೊಳವೆಬಾವಿಗಳ ಪ್ರಸ್ತುತ ಮಾಹಿತಿ ಪಡೆಯಬೇಕು. ಜತೆಗೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಟ್ಯಾಂಕರ್ ಮೂಲಕ ಜನತೆಗೆ ನೀರು ಪೂರೈಸಲು ಸಿದ್ಧವಾಗಿರಬೇಕು ಎಂದರು. ಅಧಿಕಾರಿಗಳ ಅಸಮರ್ಪಕ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಎಸ್. ಪಾಟೀಲ್‌, ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ತಾಲೂಕಿನಲ್ಲಿ ಮೃತ ಜಾನುವಾರುಗಳಿಗೆ ಪರಿಹಾರ ನೀಡಿದ ಫಲಾನುಭವಿಗಳ ಪಟ್ಟಿಯನ್ನು ಒದಗಿಸುವಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಜಿಲ್ಲಾ ಉಪ ವಿಭಾಗಾಧಿಕಾರಿ ವೆಂಕಟೇಶ ನಾಯಕ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ತಾಪಂ ಇಒ ಡಾ. ಡಿ. ಮೋಹನ್, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್ ಮತ್ತು ಶ್ರೀಧರ ಬಿದರಳ್ಳಿ ಭಾಗವಹಿಸಿದ್ದರು.