ಸಾರಾಂಶ
ಪಡುಬಿದ್ರಿ ಉದಯಾದ್ರಿ ದೇವಸ್ಥಾನದಲ್ಲಿ ಪಡುಬಿದ್ರಿ - ಕಾರ್ಕಳ ರಾಜ್ಯ ಹೆದ್ದಾರಿಗೆ ಕಂಚಿನಡ್ಕದಲ್ಲಿ ಅವೈಜ್ಞಾನಿಕ ಟೋಲ್‌ಗೇಟ್ ನಿರ್ಮಾಣ ಹುನ್ನಾರದ ವಿರುದ್ಧ ಬೃಹತ್ ಜನಾಗ್ರಹ ಸಭೆ ನಡೆಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಪಡುಬಿದ್ರಿ
ಇಲ್ಲಿನ ಕಂಚಿನಡ್ಕದಲ್ಲಿ ಟೋಲ್ ಗೇಟ್ ಅಳವಡಿಕೆಯ ದುರಾಲೋಚನೆ ಬದಿಗಿರಿಸಲಿ, ಕ್ಷೇತ್ರದ ಜನಪ್ರತಿನಿಧಿಗಳಾಗಲಿ, ನಾಗರೀಕರಾಗಲಿ ಬಳೆ ತೊಟ್ಟಿಲ್ಲ ಕಾಪು ಶಾಸಕ ಸುರೇಶ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಅವರು ಸೋಮವಾರ ಸಂಜೆ ಪಡುಬಿದ್ರಿ ಉದಯಾದ್ರಿ ದೇವಸ್ಥಾನದಲ್ಲಿ ಪಡುಬಿದ್ರಿ - ಕಾರ್ಕಳ ರಾಜ್ಯ ಹೆದ್ದಾರಿಗೆ ಕಂಚಿನಡ್ಕದಲ್ಲಿ ಅವೈಜ್ಞಾನಿಕ ಟೋಲ್‌ಗೇಟ್ ನಿರ್ಮಾಣ ಹುನ್ನಾರದ ವಿರುದ್ಧ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.ಕೇವಲ ೬ ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್ ನಿರ್ಮಾಣ ಸಾಧ್ಯವಿಲ್ಲ. ಇಂದಿನ ರಾಜ್ಯದ ಆಡಳಿತದಲ್ಲಿ ಅಭಿವೃದ್ಧಿಯ ವಿಷಯವೇ ಇಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಧರ್ಮಾತೀತ, ಪಕ್ಷಾತೀತವಾಗಿ, ಯಾವುದೇ ಆಮಿಷಕ್ಕೆ ಬಲಿಯಾಗದೇ, ಒಗ್ಗಟ್ಟಿನ ಮೂಲಕ ಟೋಲ್‌ಗೇಟ್ ಬಡಿದಟ್ಟುತ್ತೇವೆ. ದೇವರನ್ನು ಮುಂದಿರಿಸಿ ಸ್ವಾರ್ಥರಹಿತವಾಗಿ ಗಟ್ಟಿಧ್ವನಿಯಾಗಿ ಹೋರಾಟಗಾರರೊಂದಿಗೆ ಅಖಾಡದಲ್ಲಿರುತ್ತೇನೆ ಎಂದವರು ಹೇಳಿದರು.ನಂತರ ಸಭೆಯಲ್ಲಿ ಈ ಹಿಂದೆ ಬೆಳ್ಮಣ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖ್ಯಸ್ಥರಾಗಿ ಯಶಸ್ವಿಯಾಗಿರುವ ಸುಹಾಸ್ ಹೆಗ್ಡೆ ನಂದಳಿಕೆ ಮುಂದಾಳತ್ವದಲ್ಲಿ ಇಲ್ಲಿಯೂ ಸಮಿತಿಯೊಂದನ್ನು ರಚಿಸಿ ಜನಾಂದೋಲನ ನಡೆಸಲು, ರಾಜಕೀಯ ರಹಿತವಾಗಿ, ಮಂದಿರ, ಮಸೀದಿ, ಚರ್ಚ್, ಜಾತಿ ಸಂಘಟನೆಗಳ, ಬಸ್, ವಾಹನಗಳ, ಮನೆಮನೆಯ ಮಹಿಳೆಯರೂ ಪ್ರತಿಯೊಬ್ಬರೂ ಸೇರಿ ಹೋರಾಟ ನಡೆಸಲು ನಿರ್ಧರಿಸಲಾಯಿತು.ಸಭೆಯನ್ನುದ್ದೇಶಿಸಿ ನ್ಯಾಯವಾದಿ ಸರ್ವಜ್ಞ ತಂತ್ರಿ ಬೆಳ್ಮಣ್, ಕರ ವೇದಿಕೆಯ ಅನ್ಸಾರ್ ಅಹಮ್ಮದ್, ಸಾಮಾಜಿಕ ಕಾರ್ಯಕರ್ತೆ ಅನಿತಾ ಡಿಸೋಜ ಬೆಳ್ಮಣ್, ಉಡುಪಿ ಜಿಲ್ಲಾ ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕೆನರಾ ಬಸ್ ಮಾಲಕರ ಸಂಘದ ಜ್ಯೋತಿ ಪ್ರಸಾದ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಆರ್‌ಟಿಐ ಕಾರ್ಯಕರ್ತ ರಮಾನಾಥ ಶೆಟ್ಟಿ, ಕೆಪಿಸಿಸಿ ಕೋರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಮುಖರಾದ ಮಿಥುನ್ ಆರ್. ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ಪ್ರಮುಖರಾದ ನವೀನ್ ಎನ್. ಶೆಟ್ಟಿ, ವೈ. ಸುಕುಮಾರ್, ಮಧು ಆಚಾರ್ಯ ಮೂಲ್ಕಿ, ಗಾಯತ್ರಿ ಡಿ. ಪ್ರಭು, ಶೋಭ ಶೆಟ್ಟಿ, ನೀತಾ ಗುರುರಾಜ್, ಜಿತೇಂದ್ರ ಶೆಟ್ಟಿ, ದಿನೇಶ್, ರಮಾಕಾಂತ್ ದೇವಾಡಿಗ, ರವಿ ಶೆಟ್ಟಿ, ಶರಣ್ ಕುಮಾರ್ ಮಟ್ಟು, ನಾಗೇಶ್ ಭಟ್, ಲಕ್ಷ್ಮಣ್ ಶೆಟ್ಟಿ ಅರಂತಡೆ ನಂದಿಕೂರು, ಉಮಾನಾಥ್, ಸಂತೋಷ್ ಕುಮಾರ್ ಶೆಟ್ಟಿ, ದಿನೇಶ್ ಕೋಟ್ಯಾನ್, ಸಹಿತ ನೂರಾರು ಸಂಖ್ಯೆಯಲ್ಲಿ ಹೋರಾಟಗಾರರು ಉಪಸ್ಥಿತರಿದ್ದರು. ದೀಪಕ್ ಕಾಮತ್ ಕಾಂಜರಕಟ್ಟೆ ನಿರೂಪಿಸಿದರು.