ಶಿಕ್ಷಣದಿಂದಲೇ ಸಮಾಜದ ಐಕ್ಯತೆ, ಸಾಮರಸ್ಯ ಸಾಧ್ಯ

| Published : Jan 28 2024, 01:15 AM IST

ಸಾರಾಂಶ

ಕ್ಷಣ ಕ್ಷೇತ್ರದಲ್ಲಿ ಇರುವ ನಾವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಬೇಕು ಹಾಗೂ ಈ ನಿಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ತಂದಿದ್ದು, ವಿದ್ಯಾರ್ಥಿಗಳಿಗೆ ಕೌಶಲ್ಯಭರಿತ ಶಿಕ್ಷಣ ನೀಡುವಲ್ಲಿ ಇದು ಸಹಕಾರಿಯಾಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರದಲ್ಲಿಂದು ಎಲ್ಲ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಆಗುತ್ತಿದ್ದು, ಸಮಾಜದಲ್ಲಿ ಧನಾತ್ಮಕ ಬೆಳವಣಿಗೆಗೆ, ಸಮಾಜ ಐಕ್ಯತೆ ಹಾಗೂ ಸಾಮರಸ್ಯದಿಂದ ಇರಲು ಶಿಕ್ಷಣ ಕ್ಷೇತ್ರವೇ ಪರಿಣಾಮಕಾರಿ ಮಾದ್ಯಮ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ.ಎಸ್‌ ಹೇಳಿದರು.

ವಿಟಿಯುನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಇರುವ ನಾವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಬೇಕು ಹಾಗೂ ಈ ನಿಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ತಂದಿದ್ದು, ವಿದ್ಯಾರ್ಥಿಗಳಿಗೆ ಕೌಶಲ್ಯಭರಿತ ಶಿಕ್ಷಣ ನೀಡುವಲ್ಲಿ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಮಹಾತ್ಮರ ತ್ಯಾಗ, ಬಲಿದಾನದಗಳಿಂದ ಆಗಷ್ಟ್ 15, 1947ರಂದು ರಾಷ್ಟ್ರ ಸ್ವಾತಂತ್ರ್ಯಪಡೆದು, ಪ್ರಜೆಗಳಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದ ಶ್ರೇಷ್ಠ ದಿನ ಗಣರಾಜ್ಯ ದಿನ. ಕಳೆದ 75 ವರ್ಷಗಳಲ್ಲಿ ನಮ್ಮ ಭಾರತದ ಸಾಧನೆಯನ್ನ ನೆನೆಯುವಂತಹ ಹಾಗೂ ಜಗತ್ತಿಗೆ ಸಾರಿ ಹೇಳುವ ದಿನ ಇವತ್ತು. ಇವತ್ತು ನಾವು ಸ್ವತಂತ್ರ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರನ್ನು ಹಾಗೂ ನಮಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಿದ ಅಂಬೇಡ್ಕರ್ ಅವರನ್ನ ನೆನೆಯಲೇಬೇಕು. ಅವರು ಕಂಡ ಕನಸು ನನಸು ಮಾಡುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಜಾಗತಿಕವಾಗಿ ಆಗುತ್ತಿರುವ ಬದಲಾವಣೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ರಾಷ್ಪ್ರದ ಅಭಿವೃದ್ಧಿಯಲ್ಲಿ ಪ್ರಮುಖ ಅಂಗಗಳಾಗಿ ನಾವು ಹಾಗೂ ನಮ್ಮ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ವಿ.ತಾ. ವಿ ಸಂಶೋಧನೆ ಮತ್ತು ಇನ್ನೋವೆಶನ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇಲ್ಲಿನ ಕ್ಯಾಂಪಸ್ ಗಳಲ್ಲಿ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸಲಾಗಿದೆ. ಇನ್ನೋವೆಶನಗೆ ಸಂಬಂಧಿಸಿದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಚಾಲ್ತಿಯಲ್ಲಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರದ ಅನುಭವ ನೀಡಲು ಸಿಎನ್‌ಸಿ ವರ್ಕ್‌ ಶಾಪ್ ಸ್ಥಾಪಿಸಲಾಗಿದ್ದು, ಇನ್ನೂ ಇದೇ ರೀತಿಯ ಅನೇಕ ಲ್ಯಾಬಗಳನ್ನು ತರುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ವಿಟಿಯು ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ, ಪ್ರೊ. ಟಿ. ಎನ್ .ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಮತ್ತು ವಿ ಟಿ ಯು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು