ಚಿಕ್ಕಮಗಳೂರುಗಣ ರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನದ ದಿನ, ಸಂಕಲ್ಪದ ಸುದಿನವೂ ಸಹ ಹೌದು. ಭೂತ ಕಾಲದ ಪರಂಪರೆ, ವರ್ತಮಾನದ ಸಮಸ್ಯೆ ಮತ್ತು ಭವಿಷ್ಯತ್ತಿನ ಕನಸು. ಈ ’ತ್ರಿಕಾಲ’ದ ಅರಿವು, ಸ್ಪಷ್ಟತೆ ಪ್ರತಿ ಪ್ರಜೆಗೂ ಮುಖ್ಯ. ಆ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ, ಸಮೃದ್ಧಿಗೆ ದಾರಿ ದೀಪ ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

- ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಗಣ ರಾಜ್ಯೋತ್ಸವ ಸಮಾರಂಭ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಣ ರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನದ ದಿನ, ಸಂಕಲ್ಪದ ಸುದಿನವೂ ಸಹ ಹೌದು. ಭೂತ ಕಾಲದ ಪರಂಪರೆ, ವರ್ತಮಾನದ ಸಮಸ್ಯೆ ಮತ್ತು ಭವಿಷ್ಯತ್ತಿನ ಕನಸು. ಈ ’ತ್ರಿಕಾಲ’ದ ಅರಿವು, ಸ್ಪಷ್ಟತೆ ಪ್ರತಿ ಪ್ರಜೆಗೂ ಮುಖ್ಯ. ಆ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ, ಸಮೃದ್ಧಿಗೆ ದಾರಿ ದೀಪ ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಹಲವು ಸತ್ಯಾಗ್ರಹ ಹಾಗೂ ಹೋರಾಟಗಳ ಮೂಲಕ ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಬ್ರಿಟಿಷರು "ನೀವು ಸ್ವಾತಂತ್ರ್ಯವೇನೋ ಪಡೆದಿರಿ. ಆದರೆ, ನಿಮ್ಮ ಆಡಳಿತವನ್ನು ನೀವೇ ಹೇಗೆ ಮಾಡಿಕೊಳ್ಳುತ್ತೀರಿ ? ಇಷ್ಟೊಂದು ಭಾಷೆ ಇರುವ ಈ ದೊಡ್ಡ ದೇಶದಲ್ಲಿ ಸಂವಿಧಾನ ರಚನೆ ಅಸಾಧ್ಯ " ಎಂಬ ಒಂದು ಮಾತನ್ನು ಹೇಳಿದ್ದರು.

ಇಂತಹ ಸವಾಲು ಸ್ವೀಕರಿಸಿದ ಭಾರತೀಯ ನಾಯಕರು ಸಭೆ ಸೇರಿ ನಾವು ನಮ್ಮದೇ ಆದ ಒಂದು ಸಂವಿಧಾನ ರಚನೆ ಮಾಡಲೇಬೇಕು ಎಂದು ತೀರ್ಮಾನ ಮಾಡುತ್ತಾರೆ. ಸಂವಿಧಾನ ರಚನೆಗೆ ಇದ್ದ ಸಮಸ್ಯೆಯೆಂದರೆ ಆಗ ಇದ್ದ ರಾಜ ಪ್ರಭುತ್ವ. ಗಣರಾಜ್ಯ ವ್ಯವಸ್ಥೆಗೆ ಅಡ್ಡಗಾಲು ಹಾಕುವ ಪರಿಸ್ಥಿತಿಯಿದ್ದರೂ ನಮ್ಮ ಎಲ್ಲ ಭಾರತೀಯ ನಾಯಕರ ಪ್ರಯತ್ನ ದಿಂದ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಕರಡು ಸಮಿತಿ ರಚನೆಯಾಯಿತು ಎಂದರು.

ಈ ಸಮಿತಿ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂವಿಧಾನ ಮತ್ತು ಕಾನೂನುಗಳನ್ನು ಅರಿತು ನಮ್ಮ ದೇಶಕ್ಕೆ ಅಗತ್ಯ ಇರುವ ಹಲವು ಕಾನೂನುಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡಿದೆ. ಕರಡು ರಚನಾ ಸಮಿತಿ ತಜ್ಞರು, ಸದಸ್ಯರು ಸುಮಾರು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಶ್ರಮಿಸಿ ಸಿದ್ಧಪಡಿಸಿದ ಸಂವಿಧಾನ ನಮ್ಮದು. ಇದು ನವೆಂಬರ್ 26, 1949 ರಲ್ಲಿ ಪೂರ್ಣಗೊಂಡಿದ್ದು, ಆ ದಿನವನ್ನು ನಾವು ’ರಾಷ್ಟ್ರೀಯ ಸಂವಿಧಾನ ದಿನ’ ಎಂದು ಆಚರಿಸುತ್ತೇವೆ ಎಂದು ಹೇಳಿದರು.

ನಮ್ಮ ಸಂವಿಧಾನವನ್ನು 1950 ರ ಜನವರಿ 26 ರಂದು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅಂಗೀಕರಿಸು ವುದರೊಂದಿಗೆ ಭಾರತದ ಚರಿತ್ರೆಯಲ್ಲಿ ಹೊಸ ಅಧ್ಯಾಯವೇ ತೆರೆದುಕೊಂಡಿತು. ಭರತಭೂಮಿ ’ಗಣರಾಜ್ಯ’ವಾದ ಆ ಸಡಗರದ ಕ್ಷಣ, ಐತಿಹಾಸಿಕ ದಿನವನ್ನು ನಾವು ’ಗಣರಾಜ್ಯೋತ್ಸವ’ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇಂದು ನಮ್ಮ ಭಾರತೀಯ ಗಣರಾಜ್ಯೋತ್ಸವಕ್ಕೆ 77ನೇ ವರ್ಷದ ಮಹಾ ಸಂಭ್ರಮ ಎಂದರು.ಭಾರತದ ವೈಶಿಷ್ಟ್ಯಗಳು ನೂರಾರು. ಶಾಂತಿ ನಮ್ಮ ಮಂತ್ರ, ಸಹನೆ ನಮ್ಮ ಶಕ್ತಿ, ಸೌಹಾರ್ದತೆ ನಮ್ಮ ಹುಟ್ಟು ಗುಣ, ಕೂಡಿ ಬಾಳುವುದು ನಮ್ಮ ಪರಂಪರೆ, ಅನೇಕತೆಯಲ್ಲಿ ಏಕತೆ ನಮ್ಮ ವಿಶೇಷ, ಸಮನ್ವಯತೆ ನಮ್ಮ ಸಹಜತೆ, ಸರ್ವ ಧರ್ಮ ಸಮಭಾವ ನಮ್ಮ ಶ್ರೇಷ್ಠತೆ, ಸಕಲ ಜೀವಾತ್ಮಗಳನ್ನು ಪ್ರೀತಿಸುವುದು ನಮ್ಮ ಔದಾರ್ಯ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲೂ ಹಾಗೂ ಸ್ವಾತಂತ್ರ್ಯ ನಂತರದಲ್ಲೂ ನಮ್ಮ ದೇಶದಲ್ಲಿದ್ದ ತೀವ್ರ ಬಡತನ, ಅನಕ್ಷರತೆ, ನಿರು ದ್ಯೋಗಗಳಂತಹ ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದ ಕಾಂಗ್ರೆಸ್ ಪಕ್ಷ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಸಾರಥ್ಯದಲ್ಲಿ ಪ್ರಗತಿಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪಂಚವಾರ್ಷಿಕ ಯೋಜನೆಗಳ ಮೂಲಕ ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮುಂತಾದವುಗಳ ಜೊತೆಗೆ ಸಮರ್ಪಕ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳನ್ನು ಕಲ್ಪಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡಿರುವುದು ನಮ್ಮ ಕಾಂಗ್ರೆಸ್ ಪಕ್ಷದ ಹೆಮ್ಮೆ ಎಂದರು.

ನಮ್ಮ ಸಂವಿಧಾನದಲ್ಲಿ ಬರುವ ಸಮಾಜವಾದ ಹಾಗೂ ಜಾತ್ಯತೀತ ಸಿದ್ಧಾಂತಗಳನ್ನು ಸಾರ್ಥಕಗೊಳಿಸಲೆಂದೆ ನಮ್ಮ ಕಾಂಗ್ರೆಸ್ ಸರ್ಕಾರ 2023ರಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ "ಪಂಚ ಗ್ಯಾರಂಟಿ " ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದಿರುವುದು ಸಂತೋಷದ ವಿಷಯ. ಈವರೆಗೂ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ "ಗೃಹ ಲಕ್ಷ್ಮಿ” ಯೋಜನೆಯಡಿ ₹1,215 ಕೋಟಿ, “ಗೃಹ ಜ್ಯೋತಿ " ಯೋಜನೆಯಡಿ ₹318 ಕೋಟಿ, “ಅನ್ನಭಾಗ್ಯ " ಯೋಜನೆಯಡಿ ₹416 ಕೋಟಿ, "ಶಕ್ತಿ " ಯೋಜನೆಯಡಿ ₹223 ಕೋಟಿ ಮತ್ತು "ಯುವನಿಧಿ” ಯೋಜನೆಯಡಿ ₹12 ಕೋಟಿ ಒಟ್ಟು ₹2,184 ಕೋಟಿಗಳನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ ಎಂದು ಹೇಳಿದರು.

ಶಾಸಕ ಎಚ್‌.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ಕೆಪೆಕ್‌ ಅಧ್ಯಕ್ಷ ಬಿ.ಎಚ್‌. ಹರೀಶ್‌, ಕಾಡಾ ಅಧ್ಯಕ್ಷ ಡಾ. ಅಂಶುಮಂತ್‌, ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಜಿತೇಂದ್ರಕುಮಾರ್‌ ದಯಾಮ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಎಸ್. ಕೀರ್ತನಾ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್‌, ಸಿಡಿಎ ಅಧ್ಯಕ್ಷ ನಯಾಜ್‌ ಅಹಮದ್‌ ಉಪಸ್ಥಿತರಿದ್ದರು.

26 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಧ್ವಜಾರೋಹಣ ನೆರವೇರಿಸಿ ತುಕಡಿಗಳಿಂದ ಗೌರವ ಸ್ವೀಕರಿಸಿದರು. ಡಿಸಿ ನಾಗರಾಜ್‌, ಎಸ್ಪಿ ಜಿತೇಂದ್ರಕುಮಾರ್‌ ದಯಾಮ, ಜಿಪಂ ಸಿಇಓ ಕೀರ್ತನಾ ಇದ್ದರು.