ಗಣರಾಜ್ಯೋತ್ಸವ ಭಾರತೀಯರನ್ನು ಒಂದುಗೂಡಿಸಿದ ದಿನ: ಶಾಸಕ ಎಚ್.ಟಿ.ಮಂಜು

| Published : Jan 27 2025, 12:50 AM IST

ಗಣರಾಜ್ಯೋತ್ಸವ ಭಾರತೀಯರನ್ನು ಒಂದುಗೂಡಿಸಿದ ದಿನ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವರ್ಷಗಳ ಸುದೀರ್ಘ ಅವಲೋಕನ ಮತ್ತು ಚರ್ಚೆ ನಂತರ ಅಂತಿಮವಾಗಿ 26 ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26ನೇ ಜನವರಿ 1950 ರಿಂದ ಜಾರಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗಣರಾಜ್ಯೋತ್ಸವ ಭಾರತೀಯರಾದ ನಮ್ಮನ್ನು ಭಾವೈಕ್ಯ, ಭಾಷಿಕ ಮತ್ತು ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕ ಬೆಸುಗೆ ಹಾಕಿ ಒಂದುಗೂಡಿಸಿದ ದಿನವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಸ್ವಾತಂತ್ರ‍್ಯಗೊಂಡ ಭಾರತವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸಿ ಏಕರೂಪದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತ ಸಂವಿಧಾನ ಕರಡು ರಚನಾ ಸಮಿತಿ ರಚಿಸಲಾಯಿತು ಎಂದರು.

ಎರಡು ವರ್ಷಗಳ ಸುದೀರ್ಘ ಅವಲೋಕನ ಮತ್ತು ಚರ್ಚೆ ನಂತರ ಅಂತಿಮವಾಗಿ 26 ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26ನೇ ಜನವರಿ 1950 ರಿಂದ ಜಾರಿಗೆ ತರಲಾಯಿತು ಎಂದು ಅಭಿಮಾನದಿಂದ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿರತ ಪ್ರಯತ್ನ ಹಾಗೂ ಪಾಂಡಿತ್ಯದಿಂದ ನಮಗೆ ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಲಿಖಿತ ಸಂವಿಧಾನ ದೊರೆತಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಅಶೋಕ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು. ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ, ಉಪಾಧ್ಯಕ್ಷೆ ಸೌಭಾಗ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ತಾಪಂ ಇಒ ಸುಷ್ಮಾ, ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ, ಆನಂದೇಗೌಡ, ಪುರಸಭೆ ಮುಖ್ಯ ಅಧಿಕಾರಿ ನಟರಾಜ್, ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.