10 ಸಾವಿರ ಗೌರವಧನ ನೀಡುವಂತೆ ಮನವಿ

| Published : May 22 2025, 01:05 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ಘೋಷಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವ ಧನ ನೀಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.

ಬೆಳಗಾವಿ: ಸಿಎಂ ಸಿದ್ದರಾಮಯ್ಯನವರು ಘೋಷಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವ ಧನ ನೀಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.

ಹಂದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯನವರು ಏಪ್ರಿಲ್ ತಿಂಗಳಿನಿಂದ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವಧನ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಅದು ಜಾರಿಯಾಗದ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯಲಾಯಿತು. ಆದರೀಗ ಸರ್ಕಾರ ಕೇವಲ 1 ಸಾವಿರ ರು. ಹೆಚ್ಚಿಸುವುದಾಗಿ ತಿಳಿಸಿದೆ. ವಿಧವೆಯರು ಅಥವಾ ಬಡ ಮಹಿಳೆಯರೇ ಹೆಚ್ಚಾಗಿ ಆಶಾ ಕಾರ್ಯಕರ್ತೆಯರಾಗಿದ್ದು, ತಾಯಿ ಮಗುವಿನ ಆರೈಕೆ ಮಾಡುತ್ತೇವೆ. ಆದರೂ ಕೂಡ ನಮಗೆ ಸರ್ಕಾರ ₹10 ಸಾವಿರ ಗೌರವಧನ ನೀಡದಿರುವುದು ವಿಪರ್ಯಾಸವೇ ಸರಿ. 3 ತಿಂಗಳಿಗೊಮ್ಮೆ ಕೇವಲ ₹5000 ಗೌರವಧನ ನೀಡಿದರೇ, ಜೀವನ ನಡೆಸುವುದು ಹೇಗೆ ಎಂದು ಆಶಾ ಕಾರ್ಯಕರ್ತೆ ಮಹಾದೇವಿ ಕುರ್ಯನ್ನವರ ಪ್ರಶ್ನಿಸಿದರು. ಈ ವೇಳೆ ವಕೀಲರಾದ ರಾಜೀವ್, ಹೇಮಾ ಹಾವಳ, ಅನುಪಮಾ ಶಿವಣಗೇಕರ, ಲಕ್ಷ್ಮೀ ಕೊಚೇರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.