ಸಾರಾಂಶ
ರಟ್ಟೀಹಳ್ಳಿ: ವಿವಿಧ ರಾಜ್ಯಗಳ ಮಾದರಿಯಂತೆ ಕರ್ನಾಟಕದಲ್ಲೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 250 ಅಡಿ ಎತ್ತರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಬಸವರಾಜ ಎನ್. ಹೆಚ್. ರಾಜ್ಯ ಸರಕಾರಕ್ಕೆ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನ ಲಾಲ್ ಬಾಗ್ ಗಾರ್ಡನ್ ಸುಮಾರು 245 ಎಕರೆ ವಿಶಾಲವಾದ ಪ್ರದೇಶವಿದ್ದು, ಅಲ್ಲಿ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಮುಖ್ಯ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದರು. ಕಳೆದ ವರ್ಷ ರಾಜ್ಯವ್ಯಾಪಿ ಭೀಮ್ ಸೇನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ ಎಲ್ಲ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಸತೀಶ ಜಾರಕಿಹೊಳಿ ಸೇರಿದಂತೆ ಸಚಿವ ಸಂಪುಟದ ಮುಖಂಡರುಗಳಿಗೆ ಮನವಿ ಮಾಡಿದ್ದು ಕಾರಣ ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ಅವರು ಕಳೆದ ಎಪ್ರಿಲ್ 2023ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ 125 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ, ಅದೇ ರೀತಿ ಆಂಧ್ರಪ್ರದೇಶ ಮುಖ್ಯ ಮಂತ್ರಿ ವೈ.ಎಸ್. ಜಗನ್‍ಮೋಹನ್ ರೆಡ್ಡಿಯವರು ವಿಜಯವಾಡದಲ್ಲಿ ಜನವರಿ-2024 206 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿದ್ದು ಅದೇ ರೀತಿ ರಾಜ್ಯದಲ್ಲೂ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಜಿಲ್ಲೆಯ ಎಲ್ಲ ಭೀಮ್ ಸೇನೆ ಕಾರ್ಯಕರ್ತರ ಹಕ್ಕೋತ್ತಾಯವಾಗಿದ್ದು, ಮುಂಬರುವ 2025-26ನೇ ಸಾಲಿನ ಬಜೇಟ್‍ನಲ್ಲಿ ಮಂಡನೆ ಮಾಡಿ ಆದಷ್ಟು ಬೇಗ ರಾಜ್ಯ ಸರಕಾರ ತೀರ್ಮಾನ ಪ್ರಕಟಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಭೀಮ್ ಸೇನೆ ಜಿಲ್ಲಾ ಗೌರಾವಾಧ್ಯಕ್ಷ ರಾಜು ಮುಕ್ಕಣ್ಣನವರ ಮಾತನಾಡಿ, ಅಹಿಂದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ನಮ್ಮ ಸಮಾಜದ ಮನವಿಗೆ ಸ್ಪಂದಿಸಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿಯಲಾಗುವುದು ಎಂದು ಎಚ್ಚರಿಸಿದರು.
ಡಿ.ಎಸ್.ಎಸ್ ತಾಲೂಕಾಧ್ಯಕ್ಷ ರಾಮಪ್ಪ ಮಾದಾಪುರ, ಹಿರೇಕೆರೂರ ತಾಲೂಕಾಧ್ಯಕ್ಷ ಕಾಂತೇಶ ಹಂಚಿನಮನಿ, ಪ್ರವೀಣ ಗುಡ್ಡದಮಾದಾಪುರ, ಗುರುರಾಜ ಹರಿಜನ, ನಾಗರಾಜ ಬತ್ತಿಕೊಪ್ಪ, ರಾಮಚಂದ್ರಪ್ಪ ಹಿಂಡಸಗಟ್ಟಿ ಹಾಗೂ ಮುಂತಾದವರು ಇದ್ದರು.