ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾಗಿರುವ ೭ ನೇ ವೇತನ ಆಯೋಗದ ವರದಿ ಜಾರಿ, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿ ಹಾಗೂ ನಗದು ರಹಿತ ಆರೋಗ್ಯ ಸೇವೆಯನ್ನು ನೀಡಬೇಕೆಂದು ಆಗ್ರಹಿಸಿ ರಾಜ್ಯ ಸಂಘದ ಸೂಚನೆಯ ಮೇರೆಗೆ ಜ.೧೯ ರಂದು ಶಾಸಕರು ಹಾಗೂ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ತಿಳಿಸಿದ್ದಾರೆ.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ನೌಕರರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರ ನೇತೃತ್ವದಲ್ಲಿ ಮಂಡ್ಯದಲ್ಲಿ ಜ. ೬ ರಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನೌಕರರ ಬಹು ನಿರೀಕ್ಷಿತ ಬೇಡಿಕೆ ೭ ನೇ ವೇತನ ಆಯೋಗದ ವರದಿ ಜಾರಿಗೆ ತರುವುದು.
ರಾಜ್ಯದ ನೌಕರರಿಗೆ ವಿಶೇಷವಾಗಿ ನಗದು ರಹಿತ ಚಿಕಿತ್ಸೆ ನೀಡುವುದು, ಹೊಸ ಪಿಂಚಣಿ ಯೋಜನೆಯನ್ನು ತೆಗೆದು ಹಳೆ ಪಿಂಚಣಿ ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕೆಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು.
ಈ ಬೇಡಿಕೆಗಳನ್ನು ಜಾರಿಗೊಳಿಸುವ ಸಂಬಂಧ ರಾಜ್ಯದ ಎಲ್ಲ ಶಾಸಕರನ್ನೂ ಜ.೧೯ ರಿಂದ ೨೧ ರೊಳಗೆ ಭೇಟಿ ಮಾಡಿ ರಾಜ್ಯದ ಸರ್ಕಾರಿ ನೌಕರರು ಅನುಭವಿಸುತ್ತಿರುವ ಸಂಕಷ್ಟವನ್ನು ವಿವರಿಸಬೇಕೆಂದು ನಿರ್ಣಯಿಸಲಾಗಿತ್ತು.
ಅದರಂತೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.೧೯ ರಂದು ತುರುವೇಕೆರೆಯ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಸರ್ಕಾರದ ಪ್ರತಿನಿಧಿಯಾಗಿರುವ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ನಂ.ರಾಜು ತಿಳಿಸಿದರು.
ಶಾಸಕರ ಮೂಲಕ ರಾಜ್ಯ ಸರ್ಕಾರಿ ನೌಕರರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ತರಲು ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಶಂಕುಸ್ಥಾಪನೆ: ತಾಲೂಕಿನ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಸುಮಾರು ೫೦ ಲಕ್ಷ ರು.ಗಳ ವೆಚ್ಚದಲ್ಲಿ ಸರ್ಕಾರಿ ನೌಕರರ ಸಂಘದ ಕಟ್ಟಡದ ಮೇಲಂತಸ್ಥಿನಲ್ಲಿ ನೌಕರರ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದೆ.
ಈ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ನೆರವೇರಿಸಲಿದ್ದಾರೆ. ಶುಕ್ರವಾರ ಸಂಜೆ ೪.೩೦ ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರು ಹಾಗೂ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ಕಾರ್ಯಕ್ರಮಕ್ಕೆ ಆಗಮಿಸುವರು.
ಸರ್ಕಾರದ ಗಮನ ಸೆಳೆಯಲು ತಾಲೂಕಿನ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಂ.ರಾಜು ಮನವಿ ಮಾಡಿದರು.
ಖಜಾಂಚಿ ನಾಗರಾಜು, ಉಪಾಧ್ಯಕ್ಷ ವೀರಪ್ರಸನ್ನ, ರಾಜ್ಯ ಪರಿಷತ್ ಸದಸ್ಯ ಗಿಡ್ಡೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ, ನಿರ್ದೇಶಕಿ ಮಮತ, ಅಶ್ವಿನಿ, ಪಾಪಣ್ಣ ಇನ್ನಿತರರು ಪಾಲ್ಗೊಂಡಿದ್ದರು.