ಮಾದಿಗ ಸ್ಮಶಾನಕ್ಕೆ ಆಗ್ರಹಿಸಿ ಅಣುಕು ಶವಯಾತ್ರೆ

| Published : Jan 10 2025, 12:46 AM IST

ಸಾರಾಂಶ

ಜಿಲ್ಲೆಯಲ್ಲಿ ಮಾದಿಗ ಜನಾಂಗಕ್ಕೆ ಸ್ಮಶಾನ ಹಾಗೂ ಇರುವ ಸ್ಮಶಾನಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ದಲಿತ ಸಮಿತಿ (ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಮಿತಿ ವತಿಯಿಂದ ಅಣುಕು ಶವಯಾತ್ರೆ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಮಾದಿಗ ಜನಾಂಗಕ್ಕೆ ಸ್ಮಶಾನ ಹಾಗೂ ಇರುವ ಸ್ಮಶಾನಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ದಲಿತ ಸಮಿತಿ (ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಮಿತಿ ವತಿಯಿಂದ ಅಣುಕು ಶವಯಾತ್ರೆ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದ ವರೆಗೆ ಅಣುಕು ಶವಯಾತ್ರೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪೊಲೀಸರು ಅಣುಕು ಶವಯಾತ್ರೆಗೆ ಭುವನೇಶ್ವರಿ ವೃತ್ತದವರೆಗೆ ಮಾತ್ರ ಅನುಮತಿ ನೀಡಿದ್ದರಿಂದಾಗಿ ಭುವನೇಶ್ವರಿ ವೃತ್ತದವರೆಗೆ ಅಣುಕು ಶವಯಾತ್ರೆ ನಡೆಸಿ ನಂತರ ಜಿಲ್ಲಾಡಳಿತದ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಅರಕಲವಾಡಿ ನಾಗೇಂದ್ರ ಮತ್ತು ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ, ಜಿಲ್ಲೆಯ ೫೩ ಗ್ರಾಮಗಳಲ್ಲಿ ಮಾದಿಗ ಜನಾಂಗಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲ. ಅಲ್ಲದೇ ಸ್ಮಶಾನ ಇರುವ ಕಡೆ ಮೂಲ ಸೌಕರ್ಯಗಳಿಲ್ಲ ಎಂದರು. ಈ ಸಂಬಂಧ ಮನವಿ ಸಲ್ಲಿಸಿ ಒಂದು ವರ್ಷ ಕಳೆದರೂ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು, ಇದು ಸಂವಿಧಾನ ವಿರೋಧಿ ನಡೆ, ಹನೂರಿನ ಕಾಡಂಚಿನ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ನದಿ ದಾಟಿ ತಮಿಳುನಾಡಿನ ಕಡೆ ಹೋಗಿ ಹೂಳಬೇಕಾಗಿದೆ ಎಂದರು.ಮಾದಿಗ ಸಮಾಜದವರು ವಾಸಿಸುವ ಗ್ರಾಮಗಳಲ್ಲಿ ಸ್ಮಶಾನಗಳು ಹಾಗೂ ಸ್ಮಶಾನಗಳ ಮೂಲಭೂತ ಸೌಕರ್ಯಗಳ ಬೇಡಿಕೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು, ಮಾದಿಗ ಸಮಾಜದವರು ವಾಸಿಸುವ ಗ್ರಾಮಗಳನ್ನು ಗುರುತಿಸಿ ಸ್ಮಶಾನಗಳನ್ನು ನೀಡುವುದು ಹಾಗೂ ಈಗಾಗಲೇ ಸ್ಮಶಾನಗಳನ್ನು ನೀಡಿರುವ ಗ್ರಾಮಗಳಲ್ಲಿ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸುವುದು. ಕೆಲವು ಗ್ರಾಮಗಳಲ್ಲಿ ಸ್ಮಶಾನ ನೀಡಿದ್ದು ಈ ಸ್ಮಶಾನಗಳನ್ನು ಒತ್ತುವರಿಯಾಗಿದ್ದು, ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸುವುದು. ಸ್ಮಶಾನ ಹಾಗೂ ಮೂಲಭೂತ ಸೌಕರ್ಯಗಳಿಗೆ ಕ್ರಮವಹಿಸದೆ ಇರುವ ಆಯಾ ತಾಲೂಕು ತಹಸೀಲ್ದಾರ್‌ಗಳ ಮೇಲೆ ಕ್ರಮ ವಹಿಸುವುದು. ಈ ಬೇಡಿಕೆಗಳು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಜವಾದ ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜೇಂದ್ರ, ಸಿದ್ದಾರ್ಥ, ಮಂಜುನಾಥ್, ಪ್ರಸಾದ್, ಶಾಗ್ಯ ಮಹೇಶ್, ಮಹದೇವಸ್ವಾಮಿ, ಹುಣಸೂರು ರಾಚಪ್ಪ, ಕೋಡಿಪುರ ಮಾದೇಶ್, ಮಲ್ಲೇಶ್, ಮುರುಗೇಶ್, ದೊರೆ, ಇತರರು ಭಾಗವಹಿಸಿದ್ದರು.