ಸಾರಾಂಶ
ಕಳೆದ ಆರು ತಿಂಗಳಿನಿಂದ ಮರಳು ಸಮಸ್ಯೆ ಉಂಟಾದ ಹಿನ್ನೆಲೆ ತಾಲೂಕಿನಲ್ಲಿ ಮನೆ, ಯಾವುದೇ ಕಟ್ಟಡ ನಿರ್ಮಿಸದ ಪರಿಸ್ಥಿತಿ ಉಂಟಾಗಿದೆ.
ಭಟ್ಕಳ: ಮರಳಿನ ಸಮಸ್ಯೆಯಿಂದ ತಾಲೂಕಿನ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬಿದ್ದಿದ್ದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ತಲೆದೋರಿರುವ ಮರಳಿನ ಸಮಸ್ಯೆ ಕೂಡಲೇ ಬಗೆಹರಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕು ಎಂಜಿನಿಯರ್ಸ್ ಮತ್ತು ಆರ್ಟಿಟೆಕ್ಟ್ ಅಸೋಸಿಯೇಶನ್‌ನ ಅಧ್ಯಕ್ಷ ನಾಗೇಂದ್ರ ನಾಯ್ಕ ಆಗ್ರಹಿಸಿದರು.
ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆರು ತಿಂಗಳಿನಿಂದ ಮರಳು ಸಮಸ್ಯೆ ಉಂಟಾದ ಹಿನ್ನೆಲೆ ತಾಲೂಕಿನಲ್ಲಿ ಮನೆ, ಯಾವುದೇ ಕಟ್ಟಡ ನಿರ್ಮಿಸದ ಪರಿಸ್ಥಿತಿ ಉಂಟಾಗಿದೆ. ಮರಳಿಲ್ಲದೇ ಕಾರ್ಮಿಕರಿಗೆ ಕೆಲಸ ಇಲ್ಲ ಎಂಬಂತಾಗಿದೆ. ಮರಳು ಸರಬರಾಜು ಆದರೆ ಎಲ್ಲ ರೀತಿಯ ಕಾಮಗಾರಿಗಳು ನಡೆದು ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಮರಳು ಸರಬರಾಜು ಆಗದೇ ಇರುವುದರಿಂದ ಆರ್ಥಿಕತೆಯ ಮೇಲೂ ಪರಿಣಾಮ ಬಿದ್ದಿದೆ. ಮರಳಿದ್ದರೆ ಮಾತ್ರ ಹೆಚ್ಚಿನ ಆರ್ಥಿಕ ವ್ಯವಹಾರ, ವಹಿವಾಟು ನಡೆಯಲಿದೆ ಎಂದ ಅವರು, ಶರಾವತಿ ನದಿ ದಡದಲ್ಲಿ ಮರಳು ತೆಗೆಯಲು ಕಾನೂನಾತ್ಮಕ ಸಮಸ್ಯೆ ಉಂಟಾಗಿದ್ದರೆ ಪಕ್ಕದ ಕುಂದಾಪುರ ತಾಲೂಕಿನಿಂದ ಮರಳು ಸರಬರಾಜಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಸರ್ಕಾರ ತಾಲೂಕಿನ ಮರಳು ಸಮಸ್ಯೆ ಬಗೆಹರಿಸಲು ಮರಳು ಸರಬರಾಜಿಗೆ ಅಂತರಜಿಲ್ಲಾ ಪರವಾನಗಿ ನೀಡಬೇಕು. ಕಳೆದ ಆರು ತಿಂಗಳಿನಿಂದ ಕೆಲಸವಿಲ್ಲದೇ ಕಾರ್ಮಿಕರು ಖಾಲಿ ಇದ್ದು, ಆದಷ್ಟು ಬೇಗ ಸರ್ಕಾರ ಮತ್ತು ಜಿಲ್ಲಾಡಳಿತ ಮರಳಿನ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಬೇಕು ಎಂದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ಸುರೇಶ ಪೂಜಾರಿ, ಉಪಾಧ್ಯಕ್ಷ ಸಿರಾಜುದ್ದೀನ್, ಸದಸ್ಯರಾದ ಮವಾನ್ ರಶೀದ್, ಅಯಮಾನ್ ಡಾಟಾ, ಮಿಸ್ಭಾ ಉಲ್ ಹಕ್, ಉಮೈರ್ ಮಿಸ್ಭಾ, ಉಸ್ಮಾ ಅಜೈಬ್, ಮೊಹ್ಮದ್ ಸುರೈಮ್ ಮುಂತಾದವರಿದ್ದರು.