ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಲು ಆಗ್ರಹ

| Published : Jun 21 2024, 01:01 AM IST

ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಕೃಷಿ ಭೂಮಿಗೆ ವರದಾನವಾಗುವ, ವರ್ಷವಿಡೀ ಜನರ ಬಾಯಾರಿಕೆ ನೀಗಿಸಲು ಸಮರ್ಥವಾದ ಬೇಡ್ತಿ ವರದಾ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ನದಿ ಜೋಡಣಾ ಹೋರಾಟ ಸಮಿತಿ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ಮನವಿ ಸಲ್ಲಿಸಿದರು.

ಹಾನಗಲ್ಲ: ರೈತರ ಕೃಷಿ ಭೂಮಿಗೆ ವರದಾನವಾಗುವ, ವರ್ಷವಿಡೀ ಜನರ ಬಾಯಾರಿಕೆ ನೀಗಿಸಲು ಸಮರ್ಥವಾದ ಬೇಡ್ತಿ ವರದಾ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ನದಿ ಜೋಡಣಾ ಹೋರಾಟ ಸಮಿತಿ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ಮನವಿ ಸಲ್ಲಿಸಿದರು.ಹಾನಗಲ್ಲಿನಲ್ಲಿ ಬಿಜೆಪಿ ಆಯೋಜಿಸಿದ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರ ಅಭಿನಂದನಾ ಸಮಾರಂಭದಲ್ಲಿ ಬೇಡ್ತಿ ವರದಾ ನದಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಹಾಗೂ ರೈತ ಮುಖಂಡರು ಮನವಿ ಸಲ್ಲಿಸಿ, ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯ ಶಿಫಾರಸ್ಸಿನಂತೆ ಭಾರತದ ಮಹಾತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ೩೦ ನದಿ ಜೋಡಣೆ ಯೋಜನೆಯಲ್ಲಿ ಬೇಡ್ತಿ ವರದಾ ನದಿ ಜೋಡಣೆ ಒಂದಾಗಿದೆ. ಈಗಾಗಲೇ ಈ ನದಿ ಜೋಡಣೆಯ ವಿಷಯದಲ್ಲಿ ಕೇಂದ್ರ ಸರಕಾರ ಸಕಾರಾತ್ಮಕವಾಗಿದೆ. ೨೦೨೧ರ ಮುಂಗಡ ಪತ್ರದಲ್ಲಿ ರಾಜ್ಯ ಸರಕಾರ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಕೂಡ ಸೂಚಿಸಿತ್ತು. ರಾಜ್ಯ ಸಂಪನ್ಮೂಲ ಇಲಾಖೆಗೆ ವರದಿಯನ್ನೂ ಸಲ್ಲಿಸಲಾಗಿದೆ. ಈ ಯೋಜನೆಯ ಅನುಷ್ಠಾನದ ವಿಷಯದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ೭ ಜಿಲ್ಲೆಗಳ ರೈತರ ಹಿತ ಕಾಯುವುದು ಕೇಂದ್ರ ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಇದು ಹೋರಾಟದ ಹಾದಿ ಹಿಡಿಯುವ ಮೊದಲು ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರಕಾರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಎಲ್ಲ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ನೂರಾರು ಟಿಎಂಸಿ ನದಿ ನೀರು ಸಮುದ್ರ ಸೇರಿ ಉಪ್ಪು ಮಾಡುವ ಬದಲು ೭ ಜಿಲ್ಲೆಗಳ ನೀರಾವರಿಗೆ ಅನುಕೂಲವಾಗುವ ಈ ಯೋಜನೆಯನ್ನು ರೈತರ, ಜನರ ಹಿತಕ್ಕೆ ಅನುಷ್ಠಾನ ಮಾಡಲಿ. ಈ ನದಿ ಜೋಡಣೆ ಮೂಲಕ ಕೇವಲ ೨೨ ಟಿಎಂಸಿ ನೀರು ವರದಾ ನದಿಗೆ ಹರಿಸಿದರೆ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಅನುಕೂಲವಾಗಿ ರೈತರ ಬಾಳು ಹಸನಾಗಲಿದೆ. ಬೇಸಿಗೆಯಲ್ಲಿಯೂ ನೀರು ದೊರೆಯುವುದರಿಂದ ಇಲ್ಲಿರುವ ಏತ ನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಆಗ್ರಹಿಸಿದ್ದಾರೆ.ನೀರಾವರಿಯ ವಿಷಯದಲ್ಲಿ ಸರಿಯಾದ ಅರಿವು ಇರುವ ಸಂಸದ ಬಸವರಾಜ ಬೊಮ್ಮಾಯಿ ಇಂತಹ ರೈತರಿಗೆ ಉಪಯೋಗವಾಗುವ ಯೋಜನೆಯನ್ನು ಅನುಷ್ಠಾನಗೊಳಿಸಿ ನಿಜವಾದ ರೈತ ಕಳಕಳಿಯನ್ನು ತೋರಲಿ ಎಂದು ಆಗ್ರಹಿಸಿದ್ದಾರೆ.