ನಗರದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ವೃತ್ತದಲ್ಲಿ ತೆರವುಗೊಳಿಸಿರುವ ಸ್ವಾಮೀಜಿಗಳ ನಾಮಫಲಕವನ್ನು ಮರು ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಒಕ್ಕಲಿಗರ ಒಕ್ಕೂಟದ ಮುಖಂಡರು ನಗರಪಾಲಿಕೆ ಆಯುಕ್ತ ಯೋಗಾನಂದ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ವೃತ್ತದಲ್ಲಿ ತೆರವುಗೊಳಿಸಿರುವ ಸ್ವಾಮೀಜಿಗಳ ನಾಮಫಲಕವನ್ನು ಮರು ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಒಕ್ಕಲಿಗರ ಒಕ್ಕೂಟದ ಮುಖಂಡರು ನಗರಪಾಲಿಕೆ ಆಯುಕ್ತ ಯೋಗಾನಂದ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.ಬಿಜಿಎಸ್ ವೃತ್ತ ನವೀಕರಣ ಸಂದರ್ಭದಲ್ಲಿ ಸ್ವಾಮೀಜಿಗಳ ನಾಮಫಲಕವನ್ನು ತೆರವು ಮಾಡಲಾಗಿದೆ. ಇಲ್ಲಿ ಬೃಹದಾಕಾರದ ನಾಮಫಲಕವನ್ನು ಮತ್ತೆ ಸ್ಥಾಪನೆ ಮಾಡಬೇಕು. ಈ ತಿಂಗಳ 13 ರಂದು ಈ ವೃತ್ತದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಿದ್ದು, ಅಷ್ಟರೊಳಗೆ ನಾಮಫಲಕ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ಟಿ.ಎಸ್.ವಿಜಯಕುಮಾರ್ ಮನವಿ ಮಾಡಿದರು. ಇದೇ 13ರಂದು ವಿವಿಧ ಒಕ್ಕಲಿಗರ ಸಂಘಟನೆಗಳು ಒಟ್ಟಾಗಿ ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ನಾನಾ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಗಳ ಸ್ವಾಮೀಜಿಗಳು, ಚುನಾಯಿತ ಪ್ರತಿನಿಧಿಗಳು, ಸಮಾಜದ ಹಲವು ಗಣ್ಯರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಆ ವೇಳೆಗೆ ಸ್ವಾಮೀಜಿಯವರ ಹೆಸರಿನ ನಾಮಫಲಕ ಸ್ಥಾಪನೆ ಮಾಡಬೇಕು ಎಂದು ಆಯುಕ್ತರಿಗೆ ಕೋರಿದರು.ಮನವಿಗೆ ಸ್ಪಂದಿಸಿದ ಪಾಲಿಕೆ ಆಯುಕ್ತ ಯೋಗಾನಂದ್ ಅವರು, ಶೀಘ್ರವಾಗಿ ನಾಮಫಲಕ ಸ್ಥಾಪಿಸಿ ಅನಾವರಣ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಒಕ್ಕೂಟದ ಉಪಾಧ್ಯಕ್ಷರಾದ ಭೈರವ ಗಿರೀಶ್, ಜಿ.ಕೆ.ಶ್ರೀನಿವಾಸ್, ಖಜಾಂಚಿ ವಿಶ್ವೇಶ್ವರಯ್ಯ, ಮುಖಂಡರಾದ ಡಾ.ಎಂ.ಕೆ.ವೀರಯ್ಯ, ರಂಗಪ್ಪ, ಎನ್.ನರಸಿಂಹರಾಜು, ಜವರೇಗೌಡ, ಕೆ.ಎಲ್.ಹರೀಶ್, ವೆಂಕಟೇಶ್, ಲೀಲಾವತಿ ಅಶೋಕ್, ಲಕ್ಷ್ಮೀದೇವಮ್ಮ, ಮಹೇಶ್, ಅಶ್ವತ್ಥ್, ಶಿವಕುಮಾರ್, ಕಲ್ಪತರು ಪ್ರಶಾಂತ್ ಸೇರಿದಂತೆ ವಿವಿಧ ಒಕ್ಕಲಿಗ ಸಂಘಟನೆಗಳ ಮುಖಂಡರು ಹಾಜರಿದ್ದರು.