ಕೌಡಗಾಂವ್‌ ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಮನವಿ

| Published : Feb 17 2024, 01:18 AM IST

ಸಾರಾಂಶ

ಮಹಾಪುರುಷರ ಮೂರ್ತಿ ಸ್ಥಾಪನೆ ಕುರಿತು ವಿವಾದ ಹಿನ್ನೆಲೆ ಬಸವ ಪರ ಸಂಘಟನೆಗಳಿಂದ ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿಗೆ ಮನವಿ ಸಲ್ಲಿಸಿ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಯಾವುದೇ ಅಭ್ಯಂತರ ಇಲ್ಲ. ಅಭ್ಯಂತರ ಇರುವುದು ಮೂರ್ತಿ ಸ್ಥಾಪನೆ ಸ್ಥಳದ ಬಗ್ಗೆ ಮಾತ್ರ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಮಹಾ ಪುರುಷರ ಮೂರ್ತಿ ಸ್ಥಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿವಿಧ ಬಸವ ಪರ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ.

ಈ ಕುರಿತು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರನ್ನು ನಿಯೋಗದಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ, ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಯಾವುದೇ ಅಭ್ಯಂತರ ಇಲ್ಲ. ಅಭ್ಯಂತರ ಇರುವುದು ಮೂರ್ತಿ ಸ್ಥಾಪನೆ ಸ್ಥಳದ ಬಗ್ಗೆ ಮಾತ್ರ ಎಂದು ತಿಳಿಸಿದರು.

ಗ್ರಾಮದ ನಡು ರಸ್ತೆಯಲ್ಲಿ ಮೂರ್ತಿ ಕೂಡಿಸುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಲಿದೆ. ಅವಘಡಗಳಿಗೆ ಕಾರಣವಾಗಲಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಮೂರ್ತಿ ಕೂಡಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ಮಹಾ ಪುರುಷರ ಮೂರ್ತಿಗಳಿಗೂ ಧಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ತಾಲೂಕಿನ ಅಧಿಕಾರಿಗಳು ಸಂತಪುರದಲ್ಲಿ ನಡೆಸಿದ ಎಲ್ಲ ಸಮುದಾಯಗಳ ಮುಖಂಡರ ಸಭೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇನ್ನೊಂದು ಬದಿಯಲ್ಲಿ ಬಸವೇಶ್ವರ ಮೂರ್ತಿ ಕೂಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದರು. ಈಗ ಕೆಲವರ ಕುಮ್ಮಕ್ಕಿನಿಂದ ವಿನಾ ಕಾರಣ ಕಿರಿಕಿರಿ ಮಾಡಲಾಗುತ್ತಿದೆ. ದಕ್ಷ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಹೊರೆಸಿ, ಅವರ ವರ್ಗಾವಣೆಗಾಗಿ ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಅಧಿಕಾರಿಗಳು ಯಾವುದೇ ಜಾತಿಗೆ ಸೀಮಿತರಾಗಿರುವುದಿಲ್ಲ. ಜಾತಿ ಹೆಸರಿನಲ್ಲಿ ವರ್ಗಾವಣೆ ಮಾಡುತ್ತ ಹೋದರೆ ಮತ್ತೊಂದು ಎಡವಟ್ಟಿಗೆ ಕಾರಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಬೀದರ್‌ನಿಂದ ಔರಾದ್ ವರೆಗಿನ ರಸ್ತೆಯಲ್ಲಿನ ಎಲ್ಲ ಮಹಾ ಪುರುಷರ ಮೂರ್ತಿಗಳನ್ನು ಸರ್ಕಾರವೇ ತೆರವುಗೊಳಿಸಿದೆ. ಇದರಲ್ಲಿ ಯಾರದ್ದೇ ಕೈವಾಡ ಇಲ್ಲ ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲ್ ಪಾಟೀಲ ಖಾಜಾಪುರ, ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಮುಖಂಡರಾದ ದತ್ತು ಪಾಟೀಲ, ಆನಂದ ದೇವಪ್ಪ, ಮಹಾದೇವ ತರನಳ್ಳಿ ಮತ್ತಿತರರು ಇದ್ದರು.