ಡಿಜೆ ಸೌಂಡ್‌ ಸಿಷ್ಟಂ ಬಳಕೆಗೆ ಅನುಮತಿ ಕಲ್ಪಿಸಲು ಸಚಿವ ಎಸ್‌ಎಸ್‌ಎಂಗೆ ಮನವಿ

| Published : Aug 31 2025, 01:09 AM IST

ಡಿಜೆ ಸೌಂಡ್‌ ಸಿಷ್ಟಂ ಬಳಕೆಗೆ ಅನುಮತಿ ಕಲ್ಪಿಸಲು ಸಚಿವ ಎಸ್‌ಎಸ್‌ಎಂಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ.ಗೆ ಅನುಮತಿ ಕೊಡಿಸಬೇಕು ಎಂದು ಡಿಜೆ, ಶಾಮಿಯಾನ, ಸೌಂಡ್ ಸಿಸ್ಟಂ ಮಾಲೀಕರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದಾರೆ.

- ಸಂಕಷ್ಟ ಬಿಚ್ಚಿಟ್ಟ ಡಿಜೆ, ಶಾಮಿಯಾನ, ಸೌಂಡ್ ಸಿಸ್ಟಂ ಮಾಲೀಕರು

- - -

ದಾವಣಗೆರೆ: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ.ಗೆ ಅನುಮತಿ ಕೊಡಿಸಬೇಕು ಎಂದು ಡಿಜೆ, ಶಾಮಿಯಾನ, ಸೌಂಡ್ ಸಿಸ್ಟಂ ಮಾಲೀಕರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಾತ್ರ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಅವರು ಆದೇಶಿಸಿದ್ದಾರೆ. ದಾವಣಗೆರೆಯಲ್ಲಿ ಮಾತ್ರವೇ ಡಿ.ಜೆ.ಗೆ ಅನುಮತಿ ಇಲ್ಲ. ವಿಜಯನಗರ, ಹಾವೇರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಡಿ.ಜೆ. ಸೌಂಡ್‌ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಜಿಲ್ಲೆಯಲ್ಲೂ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಡಿಜೆ ಬಳಕೆ ನಿಷೇಧ ಮಾಡಿದ್ದಾರೆ. ಇದರಿಂದಾಗಿ ಸಾಲ ಮಾಡಿ ಲಕ್ಷಗಟ್ಟಲೆ ಬಂಡವಾಳ ಹಾಕಿದ್ದ ಡಿ.ಜೆ. ಸೌಂಡ್‌ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಲಕ್ಷಾಂತರ ರು. ಬಂಡವಾಳ ಹಾಕಿರುವವರು ಗಣೇಶನ ಹಬ್ಬದಲ್ಲಿ ಮಾತ್ರವೇ ದುಡಿಮೆ ಮಾಡಿಕೊಳ್ಳಬೇಕು. ಆನಂತರ ಯಾರೂ ನಮಗೆ ಆರ್ಡರ್ ಕೊಡುವುದಿಲ್ಲ. ಅನೇಕರು ಡಿಜೆ ಹಾಕುತ್ತೇವೆ ಎಂದು ಗಣೇಶ ಸಮಿತಿಯವರಿಂದ ₹10- ₹20 ಸಾವಿರ ಅಡ್ವಾನ್ಸ್ ತೆಗೆದುಕೊಂಡಿದ್ದೇವೆ. ಡಿಜೆಗೆ ಅನುಮತಿ ನೀಡಬಹುದು ಎಂದು ಕಾಯುತ್ತಿದ್ದೇವೆ. ಡಿಜೆಗೆ ಅನುಮತಿ ನೀಡದಿದ್ದರೆ ಅಡ್ವಾನ್ಸ್ ವಾಪಾಸ್ ಕೊಡಲೂ ನಮ್ಮಲ್ಲೀಗ ಹಣ ಇಲ್ಲ. ಅನೇಕರು ವಿಷ ಕುಡಿಯುವ ಪರಿಸ್ಥಿತಿ ಬರಬಹುದು ಎಂದು ಅಳಲು ತೋಡಿಕೊಂಡರು.

ದಾವಣಗೆರೆ ಜಿಲ್ಲೆಯಲ್ಲಿ ಡಿಜೆ ಬ್ಯಾನ್ ಮಾಡಿದರೆ ಇಡೀ ರಾಜ್ಯದಲ್ಲೆ ಡಿಜೆ ಬ್ಯಾನ್ ಮಾಡಬೇಕು. ದಾವಣಗೆರೆಯಲ್ಲಿ ಮಾತ್ರ ಇಲ್ಲ ಎಂದರೆ ಹೇಗೆ? ಜಿಲ್ಲಾಡಳಿತದಿಂದ ಡಿಜೆಗೆ ಸಚಿವ ಮಲ್ಲಿಕಾರ್ಜುನ್ ಅವರು ಅನುಮತಿ ಕೊಡಿಸುವ ವಿಶ್ವಾಸದಲ್ಲಿ ಅವರಲ್ಲಿಗೆ ಬಂದಿದ್ದೇವೆ. ಕೊಡಿಸುವ ವಿಶ್ವಾಸ ಇದೆ ಎಂದು ಅನೇಕರು ತಿಳಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)