ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕೆಳಹಳ್ಳಿ ದಲಿತ ಮಹಿಳೆ ಶಾರದರವರನ್ನ ಗಂಡನಾದ ಪ್ರಸನ್ನ ಕೊಲೆ ಮಾಡಿರುವ ಬಗ್ಗೆ ಅನುಮಾನವಿದ್ದು, ಮರು ಮರಣೋತ್ತರ ಪರೀಕ್ಷೆ ನಡೆಸಿ ಸತ್ಯತೆ ಹೊರ ಬರುವ ಮೂಲಕ ನ್ಯಾಯಕೊಡಿಸಿ ತಪ್ಪಿಕಸ್ತರಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿ ಡಿಸಿ ಕಚೇರಿ ಮುಂದೆ ದಲಿತಪರ ಸಂಘಟನೆಗಳ ಮಹಾ ಒಕ್ಕೂಟದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮತ್ತು ಹಿಮ್ಸ್ ನಿರ್ದೇಶಕ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ಮತ್ತು ಬಿ.ಎಸ್.ಪಿ. ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಮಾಧ್ಯಮದೊಂದಿಗೆ ಮಾತನಾಡಿ, ಎಸ್.ಸಿ. ಸಮುದಾಯದ ಶಾರದ ಕಳೆದ ೬ ವರ್ಷದ ಹಿಂದೆ ಬೇಲೂರು ತಾಲೂಕಿನ ಲಿಂಗಾಯಿತ ಸಮುದಾಯದ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆಯಾಗಿರುತ್ತಾರೆ. ಎಸ್.ಸಿ. ಜಾತಿ ಎಂಬ ಕಾರಣಕ್ಕೆ ಪ್ರಸನ್ನ ಮನೆಯವರು ನಿಂದಿಸಿ ಮನೆಗೆ ಬರದಂತೆ ತಿಳಿಸಿದ್ದ ಹಿನ್ನೆಲೆಯಲ್ಲಿ ಪ್ರಸನ್ನ ಬಾಡಿಗೆ ಮನೆಯಲ್ಲಿ ವಾಸವಿರುತ್ತಾರೆ. ಆದರೆ ಇತ್ತೀಚೆಗೆ ಪ್ರಸನ್ನ ನೀನು ನನ್ನ ಮದುವೆಯಾದ ಕಾರಣಕ್ಕೆ ಮನೆಯವರು, ಜನಾಂಗದವರನನ್ನು ಬಿಡಬೇಕಾಯಿತು ಎಂದು ನಿತ್ಯ ಹೆಂಡತಿ ಶಾರದಾಳಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದರು.
ಪ್ರಸನ್ನ ಜುಲೈ ೧ರ ರಾತ್ರಿ ಕುಡಿದು ಬಂದು ಶಾರದಾಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬೆಳಗ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಬರುವಂತೆ ನಾಟಕವಾಡಿ ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪಿದ್ದಾಳೆ ಎಂದು ಬಿಂಬಿಸಿ ಸಂಬಂಧಿಕರಿಗೆ ಪೊಲೀಸರಿಗೆ ಮಾಹಿತಿ ನೀಡಿ ಕೊಲೆ ಮರೆಮಾಚಲು ಯತ್ನಿಸಿದ್ದಾನೆ. ದೇವಸ್ಥಾನಕ್ಕೆ ಮಹಿಳೆ ಬರುವಾಗ ಶುಭ್ರ ಬಟ್ಟ ಧರಿಸಿ ಬರುಬಹುದು. ಆದರೆ ನೈಟಿಯಲ್ಲೇ ಬಂದು ದೇವಾಲಯದ ಆವರಣದಲ್ಲಿ ಬಂದು ಸಾವನಪ್ಪಿರುವ ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.ಈ ಬಗ್ಗೆ ಶಾರದಾಳ ಮಗಳನ್ನು ವಿಚಾರಿಸಿದಾಗ ತಂದೆಯೇ ಅಮ್ಮನ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದಾಗ ಕೂಡಲೇ ಸಂಬಂಧಿಕರು ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಗೆ ದೂರು ನೀಡಿದರೂ ಇದುವರೆಗೂ ಸರಿಯಾದ ತನಿಖೆ ನಡೆಸದೆ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಶಾರದಾಳ ಅಣ್ಣ ತಿಮ್ಮಯ್ಯ ಎಂಬುವವರು ಪ್ರಸನ್ನ ವಿರುದ್ಧ ತನಿಖೆ ನಡೆಸುವಂತೆ ಜು. ೨ರಂದು ಹಳೇಬೀಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಪೊಲೀಸರು ದೂರನ್ನೇ ತಿರುಚಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಳೇಬೀಡು ಎಸ್‌ಐ ಸಿದ್ದಲಿಂಗ ಬನವಾಸೆಯವರಿಗೆ ದೂರವಾಣಿ ಕರೆ ಮೂಲಕ ಮರಣೋತ್ತರ ಪರೀಕ್ಷೆ ಬಗ್ಗೆ ವಿಚಾರಿಸಿದಾಗ ಸಹಜ ಸಾವು ಎಂದು ಸಬೂಬು ಹೇಳುತ್ತಾರೆ ಎಂದು ದೂರಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಜಾಸ್ತಿಯಾಗಿದ್ದು ಪೊಲೀಸ್ ಇಲಾಖೆ ಮೇಲೆ ಯಾವುದೇ ನಂಬಿಕೆ ಇಲ್ಲದಂತಾಗಿದೆ. ಆದ್ದರಿಂದ ಕೊಲೆ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ ತಪ್ಪಿತಸ್ಥ ಪ್ರಸನ್ನ ಹಾಗೂ ಇದರ ಹಿಂದೆ ಸಹಕಾರ ನೀಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕೇಸಿನ ದಿಕ್ಕು ತಪ್ಪಿಸಲು ಮುಂದಾಗಿರುವ ಪೊಲೀಸ್ ಅಧಿಕಾರಗಳನ್ನ ಅಮಾನತುಪಡಿಸಬೇಕೆಂದು ಕೋರಿದರು.ಪ್ರತಿಭಟನೆಯಲ್ಲಿ ದಸಂಸ ಮುಖಂಡ ಮಲ್ಲೇಶ್ ಅಂಬೂಗ, ಕೃಷ್ಣದಾಸ್, ಲಕ್ಷ್ಮಣ್ ಬೇಲೂರು, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ನಿಂಗರಾಜು, ಸ್ವಾಮಿ, ಚಂದ್ರು, ಲೋಕೇಶ್, ಕೆಡಿಪಿ ಸದಸ್ಯ ನವೀನ್, ಹರೀಶ್, ನಿಂಗರಾಜು, ರಮೇಶ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.