ಫ್ಲೆಕ್ಸ್, ಬ್ಯಾನರ್‌ ಅಳವಡಿಕೆಗೆ ಅವಕಾಶ ಕಲ್ಪಿಸಲು ಬ್ಯಾಡಗಿ ತಾಲೂಕು ಮುದ್ರಣಕಾರರ ಸಂಘದಿಂದ ಮನವಿ

| Published : Feb 19 2025, 12:50 AM IST

ಫ್ಲೆಕ್ಸ್, ಬ್ಯಾನರ್‌ ಅಳವಡಿಕೆಗೆ ಅವಕಾಶ ಕಲ್ಪಿಸಲು ಬ್ಯಾಡಗಿ ತಾಲೂಕು ಮುದ್ರಣಕಾರರ ಸಂಘದಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ದೇವತೆ ಜಾತ್ರಾ ಉತ್ಸವ ಸಮಿತಿಯವರು ಬ್ಯಾನರ್‌ ಕಟ್ಟುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಇದನ್ನೇ ನಂಬಿ ಬದುಕುತ್ತಿರುವ ಹಲವಾರು ಕುಟುಂಬಗಳಿಗೆ ತೊಂದರೆಯಾಗಲಿದೆ.

ಬ್ಯಾಡಗಿ: ಪಟ್ಟಣದಲ್ಲಿ ಮಾ. 1ರಿಂದ 7 ರ ವರೆಗೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವದ ವೇಳೆ ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್‌ ಕಟ್ಟಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಮುದ್ರಣಕಾರರ ಸಂಘದ ಸದಸ್ಯರು ಮಾಜಿ ಶಾಸಕ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಗಿರೀಶಸ್ವಾಮಿ ಇಂಡಿಮಠ, ಪಟ್ಟಣದಲ್ಲಿ ಸುಮಾರು ಪಟ್ಟಣದಲ್ಲಿ ಸುಮಾರು 9 ಜನ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಪುರಸಭೆಯಿಂದ ಅನುಮತಿ ಪಡೆದು ನಿಯಮಬದ್ಧವಾಗಿ ಮುದ್ರಣ ಸೇರಿದಂತೆ ಬ್ಯಾನರ್‌ಗಳನ್ನು ಮಾಡಿಕೊಡುತ್ತಿದ್ದೇವೆ. ವಿವಿಧೆಡೆ ಸಾಲ ಮಾಡಿ ಸುಮಾರು ₹10ರಿಂದ ₹15 ಲಕ್ಷ ವೆಚ್ಚದಲ್ಲಿ ಆಧುನಿಕ ಶೈಲಿಯ ಬ್ಯಾನರ್ ಯಂತ್ರಗಳನ್ನು ಖರೀದಿಸಿದ್ದೇವೆ. ಪ್ರತಿ ಘಟಕದಲ್ಲಿಯೂ ಐದಾರು ಜನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರವರ ಕುಟುಂಬಗಳ ನಿರ್ವಹಣೆ ಇದರಿಂದಲೇ ನಡೆಯುತ್ತಿದೆ, ಪ್ರತಿಯೊಂದು ಜಾತ್ರೆ, ಉತ್ಸವ ಸೇರಿದಂತೆ ವಿವಿಧ ಸಮಾರಂಭಗಳ ಕುರಿತು ಬ್ಯಾನರ್ ಮುದ್ರಿಸಿ ಕಟ್ಟುತ್ತಿದ್ದೇವೆ. ಆದರೆ ಗ್ರಾಮ ದೇವತೆ ಜಾತ್ರಾ ಉತ್ಸವ ಸಮಿತಿಯವರು ಬ್ಯಾನರ್‌ ಕಟ್ಟುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಇದನ್ನೇ ನಂಬಿ ಬದುಕುತ್ತಿರುವ ಹಲವಾರು ಕುಟುಂಬಗಳಿಗೆ ತೊಂದರೆಯಾಗಲಿದೆ. ಅದ್ದರಿಂದ ಜಾತ್ರಾ ಕಮೀಟಿಯವರು ಬ್ಯಾನರ್‌ ಕಟ್ಟಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾಲತೇಶ ಚೊಕ್ಕನಗೌಡ್ರ, ಲೋಹಿತ ಹೆಡಿಯಾಲ, ಉದಯ ಚೌದರಿ, ನೂರಅಹ್ಮದ್ ಮುಗದೂರು, ಸುಭಾಸ ಪಾಟೀಲ, ಸಚಿನ್ ಪಾಟೀಲ ಇತರರಿದ್ದರು.

ಶಾಸಕರಿಂದ ಪರಿಹಾರ ಚೆಕ್‌ ವಿತರಣೆ

ಬ್ಯಾಡಗಿ: ದುರ್ಘಟನೆಗಳು ಯಾರನ್ನೂ ಎಂದಿಗೂ ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಸರ್ಕಾರ ಅಗತ್ಯವಿರುವ ಆರ್ಥಿಕ ನೆರವು ನೀಡಲಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬ್ಯಾಡಗಿ ಮತಕ್ಷೇತ್ರದ ಕೂನಬೇವು ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಗಾಯಗೊಂಡಿದ್ದ ಮಾಲತೇಶ ಗುಡ್ಡಪ್ಪ ಹಲವಾಗಲು ಅವರಿಗೆ ಹೆಸ್ಕಾಂ ವತಿಯಿಂದ ನೀಡಿದ ₹2.50 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ಆಕಸ್ಮಿಕ ಅವಘಡಗಳು ನಮ್ಮನ್ನು ಬೆಂಬಿಡದೇ ಬೆನ್ನುಹತ್ತಿವೆ ಎಂದರೂ ತಪ್ಪಿಲ್ಲ. ನಿತ್ಯವೂ ಒಂದಿಲ್ಲೊಂದು ಕಡೆ ಇಂತಹ ದೃಶ್ಯಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ರೈತರು, ಕುರಿಗಾರರು, ದನಗಾಹಿಗಳು ಸೇರಿದಂತೆ ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಇಂತಹ ಅವಘಡಗಳನ್ನು ಎದುರಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಫಿರೋಜ್‌ಶಾ ಸೋಮನಕಟ್ಟಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕೂನಬೇವು ಗ್ರಾಪಂ ಉಪಾಧ್ಯಕ್ಷ ಮೈಲಾರೆಪ್ಪ ಮಾಳಗುಡ್ಡಪ್ಪನವರ, ಮುಖಂಡರಾದ ಬೀರಣ್ಣ ಬಣಕಾರ, ನಾಗರಾಜ ಆನವೇರಿ, ಮಲ್ಲಪ್ಪ ದೇಸಾಯಿ, ಡಿ.ಎಚ್. ಬುಡ್ಡನಗೌಡ್ರ, ಶಿವಪುತ್ರಪ್ಪ ಅಗಡಿ, ಶಿವಕುಮಾರ ಪಾಟೀಲ, ದುರ್ಗೇಶ ಗೋಣೆಮ್ಮನವರ, ಮುನ್ನಾ ಎರೆಶೀಮಿ, ಸುರೇಶ ಪೂಜಾರ ಸೇರಿದಂತೆ ಇತರರಿದ್ದರು.