ಸಾರಾಂಶ
ಸಾಗರ: ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಗರಕ್ಕೊಂದು ಕೆಎಫ್ಡಿ ತಪಾಸಣಾ ಕೇಂದ್ರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಂಗನ ಕಾಯಿಲೆ ಸ್ಯಾಂಪಲ್ ತಕ್ಷಣ ಸಿಗುವಂತೆ ಮಾಡಲು ಲ್ಯಾಬ್ ಅಗತ್ಯವಾಗಿದೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಪ್ರಾರಂಭಿಸಲಾಗಿತ್ತು. ಅದೇ ಮಾದರಿಯಲ್ಲಿ ಕೆಎಫ್ಡಿ ಸ್ಯಾಂಪಲ್ ತಪಾಸಣೆಗೆ ಲ್ಯಾಬ್ ಅಗತ್ಯವಾಗಿದೆ ಎಂದು ಹೇಳಿದರು.ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 40 ಕೋಟಿ ರು. ಅಗತ್ಯವಿದ್ದು, ಮೊದಲ ಹಂತದಲ್ಲಿ 20 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳಿಗೆ ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. ನಗರೋತ್ಥಾನ ಯೋಜನೆಯಡಿ ಪ್ರತಿ ವಾರ್ಡ್‌ಗೆ ೧.೫೦ ಕೋಟಿ ರು.ನಿಂದ 2 ಕೋಟಿ ರು.ವರೆಗೆ ಹಣ ಮಂಜೂರು ಮಾಡಲಾಗಿದ್ದು, ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದರು.
ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನ ಅಭಿವೃದ್ಧಿಗೆ ಮೊದಲ ಹಂತದಲ್ಲಿ 50 ಲಕ್ಷ ರು. ಬಿಡುಗಡೆಯಾಗಿದೆ. ದೇವಸ್ಥಾನದ ಮುಖಮಂಟಪದ ಗೋಪುರ ಮಳೆಗಾಲದಲ್ಲಿ ಸೋರುತ್ತಿರುವ ದೂರು ಇರುವ ಹಿನ್ನೆಲೆಯಲ್ಲಿ ಸ್ಥಳೀಯರ ಜೊತೆ ಚರ್ಚೆ ನಡೆಸಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗುತ್ತದೆ. ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ೨೫ ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ, ಚರಂಡಿ, ದೇವಸ್ಥಾನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.ಏಪ್ರಿಲ್, ಮೇ ತಿಂಗಳ ಹೊತ್ತಿಗೆ ನೀರಿನ ಕೊರತೆಯಿಂದ ಅಂಬಾರಗೋಡ್ಲು-ಕಳಸವಳ್ಳಿ ಲಾಂಚ್ ಸ್ಥಗಿತಗೊಳ್ಳುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ನೀರಿನ ಹರಿವು ಇರುವ ಕಡೆ ರ್‍ಯಾಂಪ್ ನಿರ್ಮಿಸುವ ಅಗತ್ಯವಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ತಕ್ಷಣ 70 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದರು.
ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಗುರುಕೃಷ್ಣ ಶೆಣೈ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.----------
೨೪ಕೆ.ಎಸ್.ಎ.ಜಿ.೧