ಸಾರಾಂಶ
ಈ ಸೇತುವೆಯಿಂದ ನೆಗ್ಗು ಮತ್ತು ಜಾನ್ಮನೆ ಗ್ರಾಪಂ ವ್ಯಾಪ್ತಿಯ ಹಲವು ಊರುಗಳ ಸಂಪರ್ಕಕ್ಕೆ ಅನುಕೂಲವಾಗುತ್ತದೆ.
ಶಿರಸಿ: ತಾಲೂಕಿನ ಮತ್ತಿಗಾರ ಗ್ರಾಮದ ಹೆಬ್ಬಲಸು ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬಾಂದಾರು ಸಹಿತ ಸೇತುವೆ ನಿರ್ಮಾಣ ಯಾವುದೇ ಕಾರಣಕ್ಕೂ ಕೈಬಿಡಬಾರದು. ನೆಗ್ಗು ಹಾಗೂ ಜಾನ್ಮನೆ ಗ್ರಾಪಂ ವ್ಯಾಪ್ತಿಯ ಜನರಿಗೆ ಸಂಪರ್ಕ ರಸ್ತೆ ಆಗುವ ಈ ಕಾಮಗಾರಿಗೆ ಕೆಲವೇ ಜನ ವಿರೋಧಿಸಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕಾಮಗಾರಿ ಮುಂದುವರಿಸಬೇಕು ಎಂದು ಸುಮಾರು ೫೦ಕ್ಕೂ ಅಧಿಕ ಜನರು ಸೇರಿ ಆಗ್ರಹಿಸಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ೨೦೨೧- ೨೨ನೇ ಸಾಲಿನಲ್ಲಿ ₹೨ ಕೋಟಿ ಮಂಜೂರಿಯಾಗಿತ್ತು. ಬಾಂದಾರು ಸಹಿತ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದಲ್ಲಿ ಕೆಲವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ೨ ವರ್ಷದಿಂದ ಕಾಮಗಾರಿ ಆರಂಭಕ್ಕೆ ಹಿನ್ನಡೆಯುಂಟಾಗಿತ್ತು.
ಅಂತಿಮವಾಗಿ ಬೇರೆ ಜಾಗವನ್ನು ಗುರುತಿಸಿ, ಕಾಮಗಾರಿ ಆರಂಭಗೊಳಿಸಲಾದರೂ ಕೆಲವರು ಪುನಃ ವಿರೋಧ ಮಾಡಿದ ಹಿನ್ನೆಲೆ ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಪರ ಮತ್ತು ವಿರೋಧ ಮಾಡುವರನ್ನು ಕರೆದು ಸಭೆ ನಡೆಸಲಾಗಿತ್ತು. ಇಬ್ಬರ ಅಹವಾಲನ್ನು ಆಲಿಸಿದ ನಂತರ ತಹಸೀಲ್ದಾರರು, ಅನುಕೂಲ ಹೆಚ್ಚಿರುವುದರಿಂದ ಕಾಮಗಾರಿ ಆರಂಭಕ್ಕೆ ಸೂಚನೆ ನೀಡಿದ್ದರು. ಈ ಕಾರಣದಿಂದ ಕಾಮಗಾರಿ ಆರಂಭಿಸಲಾಗಿತ್ತು. ಆದರೂ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ೫೦ಕ್ಕೂ ಅಧಿಕ ಜನರು ಸೇರಿ ಕಾಮಗಾರಿ ಮುಂದುವರಿಸಲು ಪಟ್ಟು ಹಿಡಿದರು.ನೆಗ್ಗು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿನಾಯಕ ಹೆಗಡೆ ಹೆಬ್ಬಲಸು ಮಾತನಾಡಿ, ಈ ಕಾಮಗಾರಿ ನೆಗ್ಗು ಮತ್ತು ಜಾನ್ಮನೆ ಗ್ರಾಪಂ ವ್ಯಾಪ್ತಿಯ ಹಲವು ಊರುಗಳ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ನೆಬ್ಬೂರು, ರೇವಣಕಟ್ಟಾ ಭಾಗದ ಸಾರ್ವಜನಿಕರು ಹೇರೂರು ರಸ್ತೆ ಸಂಪರ್ಕ ಪಡೆಯಲು ಅಮ್ಮಿನಳ್ಳಿ, ಕೊಳಗಿಬೀಸ್ ಮೂಲಕ ಈಗ ತೆರಳುತ್ತಿದ್ದಾರೆ. ಈ ಬಾಂದಾರು ಸೇತುವೆ ನಿರ್ಮಾಣವಾದರೆ ಸುಮಾರು ೧೦ ಕಿಮೀ ಪ್ರಯಾಣ ಕಡಿಮೆ ಆಗಲಿದೆ. ಅಲ್ಲದೇ ಇಲ್ಲಿಯ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ೨೦೨೧- ೨೨ರಲ್ಲಿ ₹೨ ಕೋಟಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿ ನಿರ್ಮಾಣದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು.ಸ್ಥಳೀಯರಾದ ನರಸಿಂಹ ಹೆಗಡೆ ಹೆಬ್ಬಲಸು ಮಾತನಾಡಿ, ಇಲ್ಲಿಯ ಅಗತ್ಯತೆಯನ್ನು ಅರಿತು ಸರ್ಕಾರವೇ ಈ ಕಾಮಗಾರಿ ಮಂಜೂರು ಮಾಡಿದೆ. ಎರಡೂ ಗ್ರಾಮ ಪಂಚಾಯಿತಿಗಳ ಜನತೆಗೆ ಈ ಯೋಜನೆಯಿಂದ ಪ್ರಯೋಜನವಾಗುತ್ತದೆ. ಹೀಗಾಗಿ ಈ ಕಾಮಗಾರಿಯನ್ನು ನಡೆಸಲು ಯಾವುದೇ ತೊಂದರೆ ಆಗದಂತೆ ಎಲ್ಲ ಒಟ್ಟಾಗಿ ನಿಂತು ಸಹಕರಿಸಬೇಕು ಎಂದರು. ನ್ಯಾಯವಾದಿ ಶ್ರೀಪಾದ ನಾಯ್ಕ ಮಾತನಾಡಿ, ಬಾಂದಾರು ಸಹಿತ ಸೇತುವೆ ಕಾಮಗಾರಿಯಿಂದ ಪ್ರಯೋಜನವೇ ಜಾಸ್ತಿ ಇರುವಾಗ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದರು. ಶ್ರೀಪತಿ ಹೆಗಡೆ ನೇರ್ಲದ್ದ, ದಿವಾಕರ ಹೆಗಡೆ, ಲಕ್ಷಿ ನಾಯ್ಕ, ವಿ.ಎಂ. ಹೆಗಡೆ ಹಣಗಾರ, ರೇಖಾ ಪಟಗಾರ, ದಿನೇಶ ಅಲಗೇರಿಕರ್, ರಾಮಚಂದ್ರ ಗೌಡ, ಶರಾವತಿ ಗೌಡ, ಸುಬ್ರಹ್ಮಣ್ಯ ಹೆಗಡೆ ಸುತ್ಮನೆ ಮತ್ತಿತರರು ಇದ್ದರು.