ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ವಕೀಲರ ಸಂಘದ ಟಿ.ಆರ್‌. ಗುರುಬಸವರಾಜ ಇತರರನ್ನು ಒಳಗೊಂಡ ನೂರಾರು ವಕೀಲರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಅರ್ಪಿಸಿತು.

- ರಸ್ತೆ, ರೈಲು, ಮೂಲ ಸೌಕರ್ಯವಿರುವ ಜಿಲ್ಲೆ । ನೆರೆ ಜಿಲ್ಲೆಗಳಿಗೂ ಪೀಠ ಸ್ಥಾಪನೆಯಿಂದ ಅನುಕೂಲ: ವಕೀಲರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ವಕೀಲರ ಸಂಘದ ಟಿ.ಆರ್‌. ಗುರುಬಸವರಾಜ ಇತರರನ್ನು ಒಳಗೊಂಡ ನೂರಾರು ವಕೀಲರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಅರ್ಪಿಸಿತು.

ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಎಸ್‌.ಎಸ್‌. ಮಲ್ಲಿಕಾರ್ಜುನ ಸಮಕ್ಷಮದಲ್ಲಿ ಹೋರಾಟ ಸಮಿತಿ ಹಾಗೂ ವಕೀಲರ ಸಂಘದಿಂದ ಮನವಿ ಅರ್ಪಿಸಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ನೂರಾರು ವಕೀಲರು ಒಕ್ಕೊರಲಿನಿಂದ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಬಿ.ಎಂ. ಹನುಮಂತಪ್ಪ, ಟಿ.ಆರ್. ಗುರುಬಸವರಾಜ, ದಶಕಗಳ ಹಿಂದೆಯೇ ದಾವಣಗೆರೆಯನ್ನು ರಾಜ್ಯ ರಾಜಧಾನಿ ಮಾಡಬೇಕೆಂಬ ಕೂಗು ಎದ್ದು, ಚರ್ಚೆಯೂ ಆಗಿತ್ತು. ಆದರೆ, ಅದು ಕಾರಣಾಂತರಗಳಿಂದಾಗಿ ಸಾಧ್ಯವಾಗಲಿಲ್ಲ. ಈಗ ಹೈಕೋರ್ಟ್ ಪೀಠ ಸ್ಥಾಪಿಸುವ ಅವಕಾಶವಿದೆ. ಪೀಠ ಸ್ಥಾಪನೆಗೆ ಅಗತ್ಯ ಕಟ್ಟಡ, ನಾಡಿನ ನಾಲ್ಕೂ ದಿಕ್ಕಿಗೂ ರಸ್ತೆ ಸಂಪರ್ಕ, ಮೂರು ದಿಕ್ಕಿಗೆ ರೈಲು ಸಂಪರ್ಕ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಲಭ್ಯ ದಾವಣಗೆರೆಯಲ್ಲಿದ್ದು, ಅಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದರು.

ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿ, ಯುವಜನರು, ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಗ್ರಾಪಂಗಳು, ಸಾರ್ವಜನಿಕರನ್ನು ಒಳಗೊಂಡಂತೆ ಎಲ್ಲರಿಂದಲೂ ಕೂಗು ಕೇಳಿಬರುತ್ತಿದೆ. ನ್ಯಾಯಾಂಗದ ವಿಕೇಂದ್ರೀಕರಣ ಆಗಬೇಕು. ಸಾಮಾನ್ಯ ಜನರ ಬಳಿಗೆ ನ್ಯಾಯಾಂಗ ವ್ಯವಸ್ಥೆ ಬರಬೇಕು. ಅತಿ ಕಡಿಮೆ ವೆಚ್ಚದಲ್ಲಿ ನ್ಯಾಯ ಪಡೆಯುವಂತಾಗಬೇಕೆಂಬ ಸದಾಶಯದೊಂದಿಗೆ ಹೈಕೋರ್ಟ್ ಪೀಠ ದಾವಣಗೆರೆಯಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮೂವರು ನ್ಯಾಯಮೂರ್ತಿಗಳ ಸಮಿತಿಗೂ ನಾವೆಲ್ಲರೂ ಮನವಿ ಮಾಡುತ್ತೇವೆ. ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಸಾಕಷ್ಟು ಉತ್ಸಾಹ, ಒಲವು ತೋರುತ್ತಿದ್ದಾರೆ. ಅದೇ ಕಾರಣಕ್ಕೆ ಮುಖ್ಯಮಂತ್ರಿಗಳು, ಕಾನೂನು ಸಚಿವರು ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು. ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದರಿಂದ ನೆರೆಯ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಯ ವಕೀಲರು, ಕಕ್ಷಿದಾರರಿಗೂ ಅನುಕೂಲವಾಗುತ್ತದೆ ಎಂದು ಅವರು ಸಿಎಂ ಗಮನಕ್ಕೆ ತಂದರು.

ಹೈಕೋರ್ಟ್ ಪೀಠ ಸ್ಥಾಪಿಸುವ ಮೂಲಕ ಮಧ್ಯ ಕರ್ನಾಟಕಕ್ಕೆ ದೊಡ್ಡ ಸಾಮಾಜಿಕ ನ್ಯಾಯ ಒದಗಿಸಬೇಕು. ಒಂದು ಮಾಹಿತಿ ಪ್ರಕಾರ ಹೈಕೋರ್ಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ 10,500 ಒಳಗೊಂಡಂತೆ ಇತರೆ ಜಿಲ್ಲೆಗಳ ಒಂದು ಲಕ್ಷಕ್ಕೂ ಅಧಿಕ ಪ್ರಕರಣ ವಿಚಾರಣೆ ಬಾಕಿ ಇದೆ. ಇಲ್ಲಿ ಪೀಠ ಸ್ಥಾಪನೆಯಾದರೆ ಹೈಕೋರ್ಟ್ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಈ ಭಾಗದ ಜನರಿಗೆ ಸಮೀಪದಲ್ಲಿ, ಅತೀ ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗುತ್ತದೆ. ಆರಂಭದಲ್ಲಿ ಸಂಚಾರಿ ಪೀಠ ನೀಡಲಾಗುತ್ತದೆ. 3-4 ವರ್ಷದ ಪ್ರಗತಿ ಆದರಿಸಿ ಶಾಶ್ವತ ಪೀಠ ನೀಡಲಾಗುತ್ತದೆ. ಹಾಗಾಗಿ ಹೈಕೋರ್ಟ್ ಪೀಠ ಸ್ಥಾಪಿಸಲಿ ಎಂದು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಮನವಿ ಮಾಡಿದರು. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಹ ಹೈಕೋರ್ಟ್ ಪೀಠದ ಕೂಗಿಗೆ ಸಿಎಂ ಬಳಿ ವಕೀಲರ ಬೇಡಿಕೆ ಪರವಾಗಿ ಸಿಎಂ ಗಮನ ಸೆಳೆದರು.

ಹಿರಿಯ ವಕೀಲರಾದ ಎ.ಎಂ.ಹೆಗಡೆ, ಎಲ್.ಎಚ್. ಅರುಣಕುಮಾರ, ಎಚ್.ವಿ. ರಾಮದಾಸ್, ಉಚ್ಚಂಗಿದುರ್ಗ ಬಸವರಾಜ, ಎ.ವೈ.ಪ್ರಕಾಶ, ಲೋಕಿಕೆರೆ ಸಿದ್ದಪ್ಪ, ಅನೀಸ್ ಪಾಶ, ಎಸ್.ಬಸವರಾಜ, ವಿ.ಗೋಪಾಲ, ಕಂದಗಲ್ಲು ಗೌಡ್ರು, ಮುಷ್ತಾಕ್ ಅಹಮ್ಮದ್, ಸಿ.ಪಿ.ಅನಿತಾ, ರೇಖಾ, ಜ್ಯೋತಿ, ಶಾಂತ, ವಿಜಯಮಾಲ, ಭಾಗ್ಯಮ್ಮ, ಸಿದ್ದೇಶ, ಎ.ಜಿ.ಪ್ರಸನ್ನಕುಮಾರ, ಗಣೇಶ, ಜಗಳೂರು ವಕೀಲರ ಸಂಘದ ಅಧ್ಯಕ್ಷ ನಾಗಪ್ಪ, ಹರಿಹರದ ಅಧ್ಯಕ್ಷ ಗಣೇಶ, ಸಾಕಮ್ಮ, ರುದ್ರಮ್ಮ, ಅಲಮೇಲಮ್ಮ, ವೀಣಾ, ಮಧು, ಕೃಷ್ಣ ನಾಯ್ಕ, ತಿಪ್ಪೇಶ, ಕರಿಯಪ್ಪ, ಮಹೇಶ, ಚಿತ್ರಲಿಂಗಪ್ಪ ಇತರರು ಇದ್ದರು. ಪುತ್ರನ ವಿವಾಹಕ್ಕೆ ಸಿಎಂಗೆ ಆಹ್ವಾನಿಸಲು ತೆರಳಿದ್ದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹ ವಕೀಲರ ಕೂಗಿಗೆ ಧ್ವನಿಗೂಡಿಸಿದರು.

- - -

-(ಫೋಟೋ ಇದೆ)