ಸಾರಾಂಶ
ನೌಕರರಿಗೆ ಜೀವನ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಒಪಿಎಸ್ ಜಾರಿಗೆ ಸೂಕ್ತ ಕ್ರಮ ಕೈಗೆತ್ತಿಕೊಳ್ಳಬೇಕು.
ಹಗರಿಬೊಮ್ಮನಹಳ್ಳಿ: ಹೊಸ ಪಿಂಚಣಿ ನೀತಿ ನೌಕರರ ಪಾಲಿನ ಮರಣ ಶಾಸನದಂತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೊಟ್ರಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಎನ್‌ಪಿಎಸ್ ನೌಕರರ ಸಂಘದಿಂದ ಒಪಿಎಸ್ ಹಕ್ಕೊತ್ತಾಯ ಚಿಂತನೆ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರ ಕೂಡಲೆ ಹಳೇ ಪಿಂಚಣಿ ನೀತಿಯನ್ನು ಜಾರಿಗೊಳಿಸಬೇಕು. ಅವೈಜ್ಞಾನಿಕವಾದ ಮತ್ತು ನೌಕರರ ಭವಿಷ್ಯತ್ತನ್ನು ಕಸಿಯವ ಹೊಸ ಪಿಂಚಣಿ ನೀತಿಯನ್ನು ರದ್ಧುಗೊಳಿಸಬೇಕು ಎಂದು ತಿಳಿಸಿದರು.ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಆಂಜನೇಯ ಮಾತನಾಡಿ, ನೌಕರರಿಗೆ ಜೀವನ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಒಪಿಎಸ್ ಜಾರಿಗೆ ಸೂಕ್ತ ಕ್ರಮ ಕೈಗೆತ್ತಿಕೊಳ್ಳಬೇಕು. ರಾಜ್ಯ ಸರಕಾರ ನೀಡಿದ ಭರವಸೆಯಂತೆಯೆ ಎನ್‌ಪಿಎಸ್ ರದ್ಧುಗೊಳಿಸಬೇಕು. ಕುರಿತಂತೆ ಎಲ್ಲ ಸಂಘಟನೆಗಳೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಆನಂದ್, ಸಂಘದ ದೀಪಿಕಾ, ಹರ‍್ಯಾನಾಯ್ಕ, ನಿಜಲಿಂಗಪ್ಪ, ಗೋಣಿಬಸಪ್ಪ, ಶ್ರೀನಾಥ ಆಚಾರ್, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ ಮಾತನಾಡಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ಕೊಟ್ರಪ್ಪ, ಸೋಮಶೇಖರ, ಭಾಗ್ಯನಾಯ್ಕ, ರೇಣುಕಾ, ಅಂಜಿನಪ್ಪ, ಲಕ್ಷ್ಮೀ, ಶಿಲ್ಪಾ, ಗುರುಭವನ ಸಮಿತಿ ಸಂತೋಷ್, ಪ್ರಹ್ಲಾದ್, ಧನಂಜಯ, ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ವಿಜಯಕುಮಾರ್ ಸೇರಿ ಜೆಸ್ಕಾಂ, ಆರೋಗ್ಯ ಇಲಾಖೆಯ ನೌಕರರು ಪಾಲ್ಗೊಂಡಿದ್ದರು.