ಸಾರಾಂಶ
ಹಾನಗಲ್ಲ: ಹಾನಗಲ್ಲಿನ ಶ್ರೀಗ್ರಾಮದೇವಿ 10ನೇ ಜಾತ್ರಾ ಮಹೋತ್ಸವ ತಿಳಿಮನಸ್ಸಿನಿಂದ ಶಾಂತಿ ಸೌಹಾರ್ದತೆಯ ಸಂಕೇತದೊಂದಿಗೆ ನಡೆಯಲು ಮುಕ್ತ ಮನಸ್ಸಿನಿಂದ ಎಲ್ಲರ ಸಹಕಾರ ಅಗತ್ಯ ಎಂದು ಜಾತ್ರೋತ್ಸವದ ಹಿರಿಯರು ಆದ ಮಾಜಿ ಪುರಸಭೆ ಅಧ್ಯಕ್ಷ ಯಲ್ಲಪ್ಪ ಕಿತ್ತೂರು ಮನವಿ ಮಾಡಿದರು. ಹಾನಗಲ್ಲಿನ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ತಾಲೂಕು ತಹಶೀಲ್ದಾರರು, ಜಿಲ್ಲಾ ಪೊಲೀಸ ಅಧಿಕಾರಿಗಳು ಹಾಗೂ ಸಾರ್ವಜನಿಕರೊಡಗೂಡಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಗಳಿಗೊಮ್ಮೆ ಆಚರಿಸುವ ಹಾನಗಲ್ಲ ಗ್ರಾಮದೇವಿ ಹಬ್ಬ 10 ದಿನಗಳ ಅತ್ಯಂತ ಭಕ್ತಿ ಸಮರ್ಪಣೆಯ ಸಾರ್ಥಕ ಆಚರಣೆಯಾಗಿದೆ. ಇದರಲ್ಲಿ ಹಿರಿ ಕಿರಿಯರು ಯುವಕರ ಮುಕ್ತ ಪಾಲ್ಗೊಳ್ಳುವಿಕೆಯೂ ಅತ್ಯಂತ ಮುಖ್ಯ. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ತಾಲೂಕು ಆಡಳಿತ, ಪೊಲೀಸ ಮಾರ್ಗದರ್ಶನವೂ ಸೇರಿದಂತೆ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಸ್ತು ಶಾಂತಿಯಿಂದ ಭಕ್ತಿ ಸಮರ್ಪಣೆಗೆ ಎಲ್ಲ ವ್ಯವಸ್ಥೆ ಕೈಗೊಳ್ಳುತ್ತದೆ. ಎಲ್ಲರೂ ಕೂಡಿ ಹಬ್ಬ ಆಚರಿಸೋಣ. ಹಾನಗಲ್ಲು ಸೌಹಾರ್ದತೆಗೆ ಹೆಸರಾಗುವಂತಾಗಲಿ ಎಂದರು. ಗ್ರಾಮದೇವಿ 10ನೇ ಜಾತ್ರಾ ಸಮಿತಿ ಅಧ್ಯಕ್ಷ ಮಂಜಣ್ಣ ನಾಗಜ್ಜನವರ, ಕೋಶಾಧ್ಯಕ್ಷ ರಾಜು ಗೌಳಿ, ಸಮೀತಿ ಸದಸ್ಯ ಭೋಜರಾಜ ಕರೂದಿ, ಗಣೇಶ ಮೂಡ್ಲಿ, ಚಮನ್‌ಸಾಬ ಕಿತ್ತೂರ, ಪುರಸಭೆ ಅಧ್ಯಕ್ಷೆ ವೀಣಾ ಗುಡಿ, ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ರಾಜು ಗುಡಿ ಮೊದಲಾದವರು ಮಾತನಾಡಿ, ಹಾನಗಲ್ಲು ಸೌಹಾರ್ದಕ್ಕೆ ಹೆಸರಾಗಿದೆ. ಹಬ್ಬದ ಯಶಸ್ಸಿನಲ್ಲಿ ಪೊಲೀಸ್ ಹಾಗೂ ತಾಲೂಕು ಆಡಳಿತ ಮತ್ತು ವಿವಿಧ ಸರಕಾರಿ ಇಲಾಖೆಗಳ ಸಹಕಾರ ಅತ್ಯಂತ ಮುಖ್ಯ ಎಂದು ಮನವಿ ಮಾಡಿದರು. ಹೆಚ್ಚುವರಿ ಪೊಲೀಸ ಅಧೀಕ್ಷಕ ಎಲ್.ವಾಯ್.ಶಿರಕೋಳ ಮಾತನಾಡಿ, ಶಾಂತವಾಗಿ ಹಬ್ಬ ನಡೆಯಬೇಕು ಎಂದ ಕಾರಣಕ್ಕಾಗಿಯೇ ತಾಲೂಕು ಆಡಳಿತ ಮತ್ತು ಪೊಲೀಸ ಇಲಾಖೆಯಿಂದ ಎಲ್ಲ ವ್ಯವಸ್ಥೆ ಕಲ್ಪಿಸಲು ಬಹುಬೇಗನೆ ಎಲ್ಲ ಸಮುದಾಯಗಳ ಸಭೆ ಕರೆಯಲಾಗಿದೆ. ಎಲ್ಲರ ಸಲಹೆ ಅಭಿಪ್ರಾಯಗಳನ್ನು ಪರಿಗಣಿಸಿ ನಮ್ಮ ಕಡೆಯಿಂದ ವ್ಯವಸ್ಥೆ ಮಾಡಲಾಗುವುದು. ಸಿಸಿ ಕ್ಯಾಮೆರಾ, ಪರ್ಯಾಯ ವಾಹನ ಮಾರ್ಗ, ವ್ಯಾಪಾರ ಮಳಿಗೆ, ಸಾರ್ವಜನಿಕರ ಸುರಕ್ಷತೆಗೆ ಕ್ರಮ, ಸ್ವಚ್ಛತೆಗೆ ಕ್ರಮ ಸೇರಿದಂತೆ ಎಲ್ಲವನ್ನೂ ಶಿಸ್ತುಬದ್ಧವಾಗಿ ಒದಗಿಸಲು ನಾವು ಬದ್ಧ. ಸಾರ್ವಜನಿಕರು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಅಲ್ಲದೆ ಕಾಲ ಕಾಲಕ್ಕೆ ಕೊಡಬೇಕಾದ ಸಲಹೆಗಳನ್ನು ಪೊಲೀಸ ಇಲಾಖೆ ಹಾಗೂ ತಾಲೂಕು ತಹಶೀಲ್ದಾರರಿಗೆ ನೀಡಿದರೆ ಶಾಂತಿ ಸುವ್ಯವಸ್ಥೆಗಾಗಿ ತಕ್ಷಣ ಕ್ರಮ ಜರುಗಿಸಲಾಗುವುದು. ಪೊಲೀಸ ಇಲಾಖೆ ಅತ್ಯಂತ ಕಟ್ಟುನಿಟ್ಟು ಹಾಗೂ ಕಣ್ಗಾವಲಿನಿಂದ ಎಲ್ಲವನ್ನು ಸರಿಯಾಗಿ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು. ತಾಲೂಕು ತಹಶೀಲ್ದಾರ ಎಸ್.ರೇಣುಕಾ, ಪೊಲೀಸ್ ಉಪ ಅಧೀಕ್ಷಕ ಕೆ.ವಿ.ಗುರುಶಾಂತಪ್ಪ, ಸಿಪಿಐ ಆಂಜನೇಯ, ಪುರಸಭೆ ಅಧ್ಯಕ್ಷೆ ವೀಣಾ ಗುಡಿ, ಬಸಣ್ಣ ಹಾದಿಮನಿ, ಗುರುರಾಜ ನಿಂಗೋಜಿ, ಉಮೇಶ ಮಾಳಗಿ, ಆದರ್ಶ ಶೆಟ್ಟಿ, ನಾರಾಯಣ, ರಫಿಕ್ ನೀಲಂಜಿ, ಸಿಕಂದರ ವಾಲಿಕಾರ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಆರಂಭದಲ್ಲಿ ಸಂಗೀತ ಕಲಾವಿದೆ ಸಿ.ಅನಘಾ ಪ್ರಾರ್ಥನೆ ಹಾಡಿದರು.