ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲು ಮನವಿ

| Published : May 03 2024, 01:03 AM IST

ಸಾರಾಂಶ

ಕನಕಪುರ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಅವರಿಗೆ ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಕನಕಪುರ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಅವರಿಗೆ ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಸಮತಾ ಸೈನಿಕ ದಳದ ರಾಜ್ಯ ಯುವಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಪಟ್ಟಣ ಪಂಚಾಯ್ತಿಗೆ ಸೇರಿದ ಅಂಗಡಿ ಮಳಿಗೆಗಳಿಗೆ ಹತ್ತಾರು ವರ್ಷಗಳಿಂದ ಹರಾಜು ಪ್ರಕ್ರಿಯೆ ನಡೆಸಿಲ್ಲ. ಕಳೆದ 5 ತಿಂಗಳ ಹಿಂದೆ ಅಂಗಡಿ ಮಳಿಗೆಗಳನ್ನು ಹರಾಜು ನಡೆಸಬೇಕು ಎಂದು ಅಹೋರಾತ್ರಿ ಧರಣಿ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಶೀಘ್ರವಾಗಿ ಮಳಿಗೆಗಳನ್ನು ಹರಾಜು ನಡೆಸುವುದಾಗಿ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರು. ಆದರೆ ಇದುವರೆಗೂ ಹರಾಜು ಪ್ರಕ್ರಿಯೆಯೇ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳಿಗೆಗಳನ್ನು ಹರಾಜು ನಡೆಸುವುದಾಗಿ ಭರವಸೆ ಕೊಟ್ಟು 5 ತಿಂಗಳು ಕಳೆದರೂ ಹರಾಜು ನಡೆಸದೆ ಈಗ ರಸ್ತೆ ಅಗಲೀಕರಣದ ನೆಪವೊಡ್ಡಿ ಹರಾಜು ನಡೆಸದೆ ನಮ್ಮ ಹೋರಾಟದ ಧಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ಮಳಿಗೆಗಳು ಹರಾಜು ನಡೆಸುವವರೆಗೂ ನಾವು ಬಿಡುವುದಿಲ್ಲ. ಚುನಾವಣಾ ನೀತಿ ಸಂಹಿತೆ ಇದ್ದು, ಈಗ ಚುನಾವಣೆ ಮುಗಿದಿದೆ. ಕೂಡಲೇ ಅಂಗಡಿ ಮಳಿಗೆಗಳ ಹರಾಜು ನಡೆಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಿಯಾ ಶೋರೂಂ ತೆರವುಗೊಳಿಸಿ:ಇನ್ನು ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಗಾಂಧಿ ಫಾರಂ ಬಳಿ ಕಿಯಾ ಎಂಬ ಕಾರು ಕಂಪನಿ ಜಮೀನು ಖರೀದಿಸಿ ಅದನ್ನು ವ್ಯವಸಾಯಕ್ಕಾಗಿ ಬಳಸದೇ ಬೇರೆ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಸಹ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಗಮನಹರಿಸಬೇಕು. ಜೊತೆಗೆ ದಲಿತರ ಕುಂದು ಕೊರತೆ ಸಭೆಗಳನ್ನು ನಡೆಸಬೇಕು. ನೂತನ ತಾಲೂಕು ಹಾರೋಹಳ್ಳಿ ಪಟ್ಟಣದಲ್ಲಿ ಅಂಬೇಡ್ಕರ್ ಸಮುದಾಯ ಭವನ ಹಾಗೂ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ದಲಿತ ಸಂಘಟನೆಗಳ ಅಶೋಕ್, ಚಂದ್ರು, ಕೋಟೆ ಪ್ರಕಾಶ್, ವೆಂಕಟೇಶ್, ಬೆಣಚುಕಲ್ ದೊಡ್ಡಿ ರುದ್ರೇಶ್, ಯಡುವನಹಳ್ಳಿ ಚಂದು, ಅಂಜನ್ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:

ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕೈಗೊಳ್ಳುವಂತೆ ಹಾರೋಹಳ್ಳಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವಿಜಿಯಣ್ಣ ಅವರಿಗೆ ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.